ಪ್ರತಿಭಟನೆಗಳು ಸಿಟ್ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಮಾ. 28: ‘ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಗಳು ಸಿಟ್ ತನಿಖೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ' ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರತಿಭಟನೆಗಳು ಅಲ್ಲಲ್ಲಿ ನಡೆಯುತ್ತವೆ. ಅವುಗಳನ್ನು ಸ್ಥಳೀಯ ಪೊಲೀಸರು ನೋಡಿಕೊಳ್ಳುತ್ತಾರೆ. ನಮ್ಮ ತನಿಖೆ ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ನಡೆಯಲಿದೆ. ಎಸ್‍ಐಟಿಗೆ ನಾವು ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಸತ್ಯಾಸತ್ಯತೆ ತನಿಖೆಯಿಂದ ಹೊರ ಬರುತ್ತದೆ. ಹೊರಗೆ ನಡೆಯುತ್ತಿರುವ ಪ್ರತಿಭಟನೆಗಳು ಎಸ್‍ಐಟಿ ಮೇಲೆ ಪ್ರಭಾವ ಬೀರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
‘ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೆನಪಿನ ಶಕ್ತಿ ಕಡಿಮೆ ಇದೆ. ಅವರು ಸಿಎಂ ಆಗಿದ್ದಾಗ ಅಂದಿನ ಸಚಿವ ಎಚ್.ವೈ.ಮೇಟಿ ಸಿಡಿ ಪ್ರಕರಣದಲ್ಲಿ ಏನು ಮಾಡಿದರೂ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಕರಣವನ್ಮು ಸಿಐಡಿಗೆ ಕೊಟ್ಟು ಮೇಟಿ ಪ್ರಕರಣ ಮುಚ್ಚಿ ಹಾಕಿದರು. ಯುವತಿ ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲ. ಒಬ್ಬ ಅಧಿಕಾರಿಯೇ ವಿಚಾರಣೆ ಮಾಡಿ ಎಚ್.ವೈ.ಮೇಟಿ ಅವರಿಗೆ ಕ್ಲೀನ್‍ಚಿಟ್ ನೀಡಿದರು' ಎಂದು ಬಸವರಾಜ ಬೊಮ್ಮಾಯಿ ದೂರಿದರು.
‘ಇದೇ ವಿಷಯವನ್ನು ನಾನು ಅಧಿವೇಶನದಲ್ಲಿ ಹೇಳಿದ್ದೇನೆ. ಸಿಡಿ ಯುವತಿಗೆ ರಕ್ಷಣೆ ನೀಡಲು ನಾವು ಈಗಲೂ ಬದ್ಧ. ಈಗಾಗಲೇ ಯುವತಿಗೆ ಐದು ಬಾರಿ ನೋಟೀಸ್ ನೀಡಿದ್ದೇವೆ. ಯುವತಿ ಇರುವ ಕಡೆಗೇ ಹೋಗಿ ರಕ್ಷಣೆ ನೀಡುತ್ತೇವೆ. ಅವರ ಕುಟುಂಬ ಸದಸ್ಯರಿಗೆ ರಕ್ಷಣೆ ನೀಡಲಾಗಿದೆ' ಎಂದು ಬಸವರಾಜ ಬೊಮಾಯಿ ತಿಳಿಸಿದರು.
‘ಯಾರೇ ಆಗಲಿ ಪೊಲೀಸರ ನೈತಿಕತೆಯನ್ನು ಕುಗ್ಗಿಸುವ ಕೆಲಸ ಮಾಡಬಾರದು. ಎಸ್‍ಐಟಿ ತಂಡ ಕ್ರಮಬದ್ಧವಾಗಿ ಸರಿ ಹಾದಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯ ಹೊರ ಬರಲಿದೆ. ಪ್ರಕರಣದಲ್ಲಿ ಯಾರೊಬ್ಬರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ' ಎಂದು ಇದೇ ವೇಳೆ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಡಿದರು.