ಸಿಡಿ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ: ಸಚಿವ ಈಶ್ವರಪ್ಪ
ಶಿವಮೊಗ್ಗ, ಮಾ.28: ಜಾರಕಿಹೊಳಿಯವರ ಸಿಡಿ ಪ್ರಕರಣ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿಡಿ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಡಿ ವಿಚಾರದ ಬಗ್ಗೆ ನನ್ನ ಬಳಿ ಏನೂ ಕೇಳಬೇಡಿ. ಅದು ಅವರು ಅವರಿಗೆ ಬಿಟ್ಟದ್ದು. ಸಿಡಿ ಬಗ್ಗೆ ಮಾತನಾಡೋದಕ್ಕೆ ನನಗೆ ವಾಕರಿಕೆ ಬರುತ್ತದೆ. ನನಗೆ ಸಿಡಿ ಬಗ್ಗೆ ಆಸಕ್ತಿಯಿಲ್ಲ ಎಂದು ಹೇಳಿದರು.
ಗೆಲುವು ನಿಶ್ಚಿತ: ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾವುದೇ ಚುನಾವಣೆ ಬಂದರೂ ಬಿಜೆಪಿ ಗೆಲುವು ನಿಶ್ಚಿತ. ಇತ್ತೀಚಿಗೆ ನಡೆದ ಉಪಚುನಾವಣೆ ನಡೆದ 17 ರಲ್ಲಿ 14 ಅನ್ನು ನಾವು ಗೆದ್ದಿದ್ದೇವೆ. ಇದೀಗ ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿಗೆ ಉಪಚುನಾವಣೆ ಘೋಷಣೆಯಾಗಿದೆ. ಮಾರ್ಚ್ 30 ರಂದು ನಮ್ಮ ಅಭ್ಯರ್ಥಿ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದು, ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ನಾನು ಸೇರಿದಂತೆ ಎಲ್ಲರೂ ಹೋಗ್ತೇವೆ ಎಂದರು.
ನೆಪಮಾತ್ರಕ್ಕೆ ಅಭ್ಯರ್ಥಿ ಹಾಕ್ತಾರೆ: ಕೆಲವು ಪಕ್ಷಗಳು ಅಭ್ಯರ್ಥಿಗಳನ್ನೇ ಹಾಕಲ್ಲ. ಇನ್ನೂ ಕೆಲವು ಪಕ್ಷಗಳು ನಾಮಕಾವಸ್ಥೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದ್ದಾರೆ. 3 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸುತ್ತಾರೆ ಎಂದರು.
ಕೇಂದ್ರ- ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳು, ಪಕ್ಷದ ಕಾರ್ಯಕರ್ತರ ಸಂಘಟನೆಯ ಬಲದಿಂದ ಗೆಲ್ಲುತ್ತೇವೆ ಎಂದು ಹೇಳಿದರು.