×
Ad

ಡಿಕೆಶಿಗೆ ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಕಪ್ಪು ಬಾವುಟ ಪ್ರದರ್ಶನ: ಬೆಂಗಾವಲು ವಾಹನಕ್ಕೆ ಚಪ್ಪಲಿ, ಕಲ್ಲು ತೂರಾಟ

Update: 2021-03-28 18:43 IST

ಬೆಳಗಾವಿ, ಮಾ. 28: ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸಿಕ್ಕರೆ, ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿ, ಬೆಂಗಾವಲು ವಾಹನದ ಮೇಲೆ ಚಪ್ಪಲಿ, ಕಲ್ಲು ತೂರುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. 

ರವಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಿದರು. ಈ ಮಧ್ಯೆ ರಮೇಶ್ ಜಾರಕಿಹೊಳಿ ಬೆಂಬಲಿಗರು ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನಕ್ಕೆ ಚಪ್ಪಲಿ ತೂರಿದ ಘಟನೆ ವರದಿಯಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು.

ಒಂದೆಡೆ ಸ್ವಾಗತ, ಮತ್ತೊಂದೆಡೆ ಪ್ರತಿಭಟನೆ ಹಿನ್ನೆಲೆಯಲ್ಲಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಶಿವಕುಮಾರ್ ಬೆಂಬಲಿಗರು ನೆರೆದಿದ್ದರು. ಆದರೆ, ಈ ನಡುವೆ ಕೆಲ ಕಿಡಿಗೇಡಿಗಳು ಶಿವಕುಮಾರ್ ಕಾರಿಗೆ ಚಪ್ಪಲಿ ತೂರಿದ್ದು ಕಾಂಗ್ರೆಸಿಗರನ್ನು ಕೆರಳಿಸಿದೆ. ಎರಡು ಕಡೆಯವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ ಭದ್ರತೆಗಾಗಿ ದೊಡ್ಡಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ನನ್ನ ಸ್ವಾಗತಕ್ಕೆ ಅಭಿನಂದನೆ: ‘ರಮೇಶ್ ಜಾರಕಿಹೊಳಿ ಬೆಂಬಲಿಗರು ನನ್ನನ್ನು ಬೆಳಗಾವಿ ಜಿಲ್ಲೆಗೆ ಸ್ವಾಗತ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರು ನನ್ನನ್ನು ಸ್ವಾಗತ ಮಾಡುವ ಮೂಲಕ ನನಗೆ ಶಕ್ತಿ ತುಂಬುತ್ತಿದ್ದಾರೆ. ಎಂತೆಂಥ ಘನ ಕಾರ್ಯ ಮಾಡಿದ್ದಾರೆಂದು ಪ್ರತಿಭಟನೆ ಮಾಡ್ತಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಲೇವಡಿ ಮಾಡಿದರು.

ಒಳ್ಳೆಯ ಅಭ್ಯರ್ಥಿ: ಸುರೇಶ್ ಅಂಗಡಿ ನಿಧನದಿಂದ ಬೆಳಗಾವಿ ಉಪಚುನಾವಣೆ ಆಕಸ್ಮಿಕವಾಗಿ ಬಂದಿದೆ. ಈ ಚುನಾವಣೆ ಬರಬಾರದಿತ್ತು, ಬಂದಿದೆ. ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ. ನಾವೆಲ್ಲರೂ ಸೇರಿ ಒಂದೇ ಒಂದು ಅಭ್ಯರ್ಥಿಯನ್ನು ಸೂಚಿಸಿದ್ದೇವೆ. ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿಯ ಜನ ಬೆಂಬಲವಾಗಿ ನಿಂತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಸತೀಶ್ ಜಾರಕಿಹೊಳಿ ಅವರು ಎಲ್ಲದಕ್ಕೂ ಹೊಂದಿಕೊಂಡು ಬಾಳುವ ಸೌಮ್ಯ, ಸಜ್ಜನ ಅಭ್ಯರ್ಥಿ. ರಾಜ್ಯದಲ್ಲಿ ಬಿಜೆಪಿ 25 ಮಂದಿ ಸಂಸದರಿದ್ದರೂ ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ವಿರುದ್ಧ, ಜನತೆ ಪರವಾಗಿ ಒಮ್ಮೆಯೂ ಧ್ವನಿ ಎತ್ತಲಿಲ್ಲ. ಅಲ್ಲದೆ, ಬಿಜೆಪಿ ನುಡಿದಂತೆ ನಡೆಯಲಿಲ್ಲ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕೊರೋನ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಬಿಜೆಪಿ ಸರಕಾರ ನಡೆದುಕೊಳ್ಳಲಿಲ್ಲ. ರಿಕ್ಷಾ ಚಾಲಕರು, ಮಡಿವಾಳರು, ನೇಕಾರರು ಸೇರಿದಂತೆ ಯಾರೊಬ್ಬರಿಗೂ ಬಿಡಿಗಾಸು ನೆರವು ನೀಡಲಿಲ್ಲ. 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕ್ತೀವಿ ಅಂದ್ರು ಹಾಕಲಿಲ್ಲ. ಅಡುಗೆ ಅನಿಲ 900 ರೂ., ಪೆಟ್ರೋಲ್, ಡೀಸೇಲ್ ಬೆಲೆ ಏರಿಕೆಯಿಂದ ಹೆಣ್ಣು ಮಕ್ಕಳು ಸೇರಿದಂತೆ ಜನತೆ ಕುದಿಯುತ್ತಿದ್ದಾರೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ನಾನು ಬೆಳಗಾವಿಗೆ ಆಗಮಿಸಿದ್ದೇನೆ. ನಾಳೆ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಎಂ.ಬಿ. ಪಾಟೀಲ್, ಆರ್.ವಿ.ದೇಶಪಾಂಡೆ ಸೇರಿದಂತೆ ಜಿಲ್ಲೆಯ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

‘ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋಟೆಲ್‍ಗೆ ತೆರಳುವ ವೇಳೆ ಅವರ ಬೆಂಗಾವಲು ವಾಹನದ ಮೇಲೆ ರಮೇಶ್ ಜಾರಕಿಹೊಳಿ ಬೆಂಬಲಿಗರೆನ್ನಲಾದ ಕೆಲ ಕಿಡಿಗೇಡಿಗಳು ಚಪ್ಪಲಿ, ಕಲ್ಲು ತೂರಿದ್ದು, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಇದರಿಂದ ವಾಹನದ ಗಾಜು ಪುಡಿಯಾಗಿದ್ದು, ಕೂಡಲೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ'

ರಾಜ್ಯದ ಜನರ ಪಾಡೇನು: ಸಿದ್ದರಾಮಯ್ಯ

‘ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಭಿಮಾನಿಗಳೆಂದು ಹೇಳಿಕೊಂಡವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾರುಗಳ ಮೇಲೆ ಕಲ್ಲೆಸೆದು ಪುಂಡಾಟಿಕೆ ನಡೆಸಿರುವುದು ಖಂಡನೀಯ. ಇದು ಸರಕಾರದ ಪ್ರಾಯೋಜಿತ ಗೂಂಡಾಗಿರಿ. ರಾಜ್ಯದ ಜನ ಗಮನಿಸುತ್ತಿದ್ದಾರೆ, ಎಚ್ಚರ ಇರಲಿ. ಬಿಜೆಪಿ ಆಳ್ವಿಕೆಯಲ್ಲಿ ವಿಪಕ್ಷದ ರಾಜ್ಯಾಧ್ಯಕ್ಷರಿಗೆ ರಕ್ಷಣೆ ಇಲ್ಲ ಎಂದಾದರೆ, ಸಾಮಾನ್ಯ ಜನರ ಪಾಡೇನು? ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಸಿಡಿ ಹಗರಣದ ಯುವತಿಯ ಹೇಳಿಕೆಯನ್ನು ಸಮರ್ಥಿಸುವಂತಿದೆ ಬೆಳಗಾವಿ ಪೊಲೀಸರ ‘ಮೂಕನಾಟಕ'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

‘ರಾಜಕಾರಣದಲ್ಲಿ ಜೈಕಾರ, ಹೂವಿನಹಾರ, ಧಿಕ್ಕಾರ, ಮೊಟ್ಟೆ, ಕಲ್ಲು ಎಸೆತ ಎಲ್ಲವೂ ಸರ್ವೇಸಾಮಾನ್ಯ. ನಾನು ಬರುವಾಗ ಏನಾಯಿತು? ಎಂದು ನನಗೆ ಗೊತ್ತಿಲ್ಲ. ನಾನು ಇದನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸುತ್ತೇನೆ. ಎಲ್ಲ ಘಟನೆಗಳನ್ನು ಬೆಳಗಾವಿ ಜನರು ನೋಡುತ್ತಿದ್ದಾರೆ. ನಾವು ಚುನಾವಣೆ ಮಾಡಲು ಇಲ್ಲಿಗೆ ಬಂದಿದ್ದೇವೆ. ಶಾಂತ ರೀತಿಯಿಂದ ಚುನಾವಣೆ ಮಾಡಿ ಹೋಗುತ್ತೇವೆ. ಬಿಜೆಪಿಯವರು ಇಂಥ ಮುತ್ತು-ರತ್ನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲಿ. ಅವರೇನೇ ಮಾಡಿದರೂ ನಮಗೆ ಅನುಕೂಲ'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News