'ಕೇಂದ್ರದ ಸರ್ವಾಧಿಕಾರ'ದ ಬಗ್ಗೆ ಮಾಧುಸ್ವಾಮಿಯ ಕಳವಳ ರಾಜ್ಯದ ಆರುವರೆ ಕೋಟಿ ಜನರ ಕೊರಳ ದನಿ: ಸಿದ್ದರಾಮಯ್ಯ

Update: 2021-03-28 15:13 GMT

ಬೆಂಗಳೂರು, ಮಾ. 28: ‘ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗುತ್ತಿರುವುದು ಮತ್ತು ರಾಜ್ಯದ ಯುವಜನ ಉದ್ಯೋಗ ಕಳೆದುಕೊಳ್ಳುತ್ತಿರುವ ಬಗ್ಗೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಕ್ತಪಡಿಸಿರುವ ಕಳವಳ ರಾಜ್ಯದ ಆರುವರೆ ಕೋಟಿ ಜನತೆಯ ಕೊರಳ ದನಿಯಾಗಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಅವರು ‘ವಾರ್ತಾಭಾರತಿ ಪತ್ರಿಕೆ'ಯಲ್ಲಿ ಮಾ.28ರಂದು ಪ್ರಕಟವಾದ ಸಚಿವ ಮಾಧುಸ್ವಾಮಿ ಅವರ ಹೇಳಿಕೆಯನ್ನು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದು, ‘ಕಳೆದ ಏಳು ವರ್ಷಗಳಿಂದ ನಾನು ಇದನ್ನು ಹೇಳುತ್ತಲೇ ಬಂದಿದ್ದೇನೆ. ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಹೊಂದಿರುವ ಸ್ವಾಯತ್ತತೆಯನ್ನು ಕೇಂದ್ರ ಸರಕಾರ ಕಿತ್ತುಕೊಳ್ಳುತ್ತಿರುವುದಕ್ಕೆ ಇತ್ತೀಚೆಗೆ ಜಾರಿಗೊಳಿಸಿರುವ ರೈತರ ಪಾಲಿನ ಮರಣಶಾಸನಗಳಾಗಿರುವ ಕೃಷಿ ಕಾಯ್ದೆ ತಿದ್ದುಪಡಿಗಳೇ ಸಾಕ್ಷಿಯಾಗಿವೆ' ಎಂದು ಬರೆದುಕೊಂಡಿದ್ದಾರೆ.

‘ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಕಾನೂನುಗಳಿಗೆ ಏಕಪಕ್ಷೀಯವಾಗಿ ತಿದ್ದುಪಡಿ ಮಾಡಿ ಅದನ್ನು ಅಂಗೀಕರಿಸುವಂತೆ ರಾಜ್ಯಗಳ ಮೇಲೆ ಒತ್ತಡ ಹೇರುತ್ತಿರುವ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗಲು ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯೇ ಕಾರಣ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘2020-21ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕೇಂದ್ರ ಸರಕಾರದಿಂದ 8,538 ಕೋಟಿ ರೂ.ತೆರಿಗೆ ಪಾಲು ಮತ್ತು 1,310 ಕೋಟಿ ರೂ.ಕೇಂದ್ರದಿಂದ ಅನುದಾನ ಬಂದಿಲ್ಲ. ಇದರ ಜೊತೆ 5,495 ಕೋಟಿ ರೂ. ವಿಶೇಷ ಅನುದಾನಕ್ಕೂ ಕೊಕ್ಕೆ ಹಾಕಲಾಗಿದೆ. ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಗುತ್ತಿರುವುದು ಮತ್ತು ರಾಜ್ಯದ ಯುವಜನ ಉದ್ಯೋಗ...

Posted by Siddaramaiah on Sunday, 28 March 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News