×
Ad

ಸಿಡಿ ಸರಕಾರದಿಂದ ಅಕ್ರಮ ಮುಚ್ಚಿಕೊಳ್ಳಲು ನಾಟಕ: ಸಂಸದ ಡಿ.ಕೆ.ಸುರೇಶ್

Update: 2021-03-28 21:29 IST

ಬೆಂಗಳೂರು, ಮಾ. 28: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಡಿ ಸರಕಾರವು, ತನ್ನ ಅಕ್ರಮ ಚಟುವಟಿಕೆಗಳ ಸಿಡಿಗಳನ್ನು ರಕ್ಷಿಸಿಕೊಳ್ಳಲು ನಾಟಕ(ಡ್ರಾಮಾ) ಮಾಡುತ್ತಿದ್ದು, ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಟ್ ಏನು ವಿಚಾರಣೆ ಮಾಡುತ್ತದೆ ಎಂಬುದು ಆರೋಪಿಗೆ ತಿಳಿಯುತ್ತದೆ. ಆ ಮೇಲೆ ಆತ ಪತ್ರಿಕಾಗೋಷ್ಠಿ ನಡೆಸುತ್ತಾನೆ. ಇದು ಸಿಡಿ ಸರಕಾರಿ ಪ್ರಾಯೋಜಿತ ನಾಟಕ. ಮಗಳ ವಯಸ್ಸಿನ ಹೆಣ್ಣಿಗೆ ಆದ ನೋವಿನ ಬಗ್ಗೆ ಸರಕಾರ, ಎಸ್‍ಐಟಿ ಚರ್ಚೆಯನ್ನೂ ಮಾಡುತ್ತಿಲ್ಲ. ಬೇರೆ ಯಾರಾದರೂ ಈ ರೀತಿ ಸ್ವಲ್ಪ ಮಾಡಿದ್ದರೂ, ಜೈಲಿಗೆ ಹಾಕುತ್ತಿದ್ದರು' ಎಂದು ಹೇಳಿದರು.

‘ಸಿಡಿ ಸರಕಾರ ಅಭಿವೃದ್ಧಿ, ಕೊರೋನ, ರಾಜ್ಯದಲ್ಲಿ ಬರದಿಂದ ನೀರಿಗೆ ಹಾಹಾಕಾರದ ಬಗ್ಗೆ ಚಿಂತಿಸುತ್ತಿಲ್ಲ. ಇವರ ಚಿಂತನೆ ಸಿಡಿ ರಕ್ಷಿಸಿಕೊಂಡು, ತಮ್ಮ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಕೊಂಡು ಹೋಗಲು ಚಿಂತಿಸುತ್ತಿದೆ. ಸಂತ್ರಸ್ತ ಯುವತಿಯನ್ನು ಡಿ.ಕೆ.ಶಿವಕುಮಾರ್ ನಿಯಂತ್ರಿಸುತ್ತಿದ್ದಾರೋ, ಎಸ್‍ಐಟಿ ನಿಯಂತ್ರಿಸುತ್ತಿದೆಯೋ ನನಗೆ ಗೊತ್ತಿಲ್ಲ' ಎಂದರು.

ಸಿಟ್‍ಗೆ ಫ್ರೇಮ್ ವರ್ಕ್ ಎಂಬುದೇ ಇಲ್ಲ. ಯುವತಿ ಹೇಳಿಕೆ ಆಧಾರದ ಮೇಲೆ ಇದುವರೆಗೂ ವಿಚಾರಣೆ ನಡೆಯುತ್ತಿಲ್ಲ. ಯುವತಿ ದೂರಿನ ಮೇಲೆ ಪ್ರಕರಣ ದಾಖಲು ಅಂತಾರೆ. ಆದರೆ, ಆರೋಪಿಗೆ ಪೊಲೀಸರು ಸೆಕ್ಷನ್ ಹಾಕಿದ್ದಾರೆ, ಆದರೆ ವಿಚಾರಣೆ ನಡೆಯುತ್ತಿಲ್ಲ. ಇದು ಪ್ರಕರಣ ಮುಚ್ಚಿಹಾಕುವ ಕುತಂತ್ರವೇ ಹೊರತು ಬೇರೇನೂ ಅಲ್ಲ ಎಂದು ಡಿ.ಕೆ.ಸುರೇಶ್ ಸಂಶಯ ವ್ಯಕ್ತಪಡಿಸಿದರು.

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ, ಸಂಸ್ಕೃತಿ ಬಗ್ಗೆ ಮಾತನಾಡುವ ಪಕ್ಷವಾಗಿ ಈ ರೀತಿ ಮಾಡುತ್ತಿರುವುದು ನೋಡಿದರೆ, ಇದು ಸಿಡಿಯಿಂದ ಉಳಿದುಕೊಂಡಿರುವ ಸರಕಾರವೇ ಹೊರತು ಬೇರೇನೂ ಅಲ್ಲ. ಇಡೀ ಪ್ರಕರಣ ಮುಚ್ಚಿಹಾಕಲು ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾವು ಯುವತಿಯ ರಕ್ಷಣೆಗೆ ನಿಲ್ಲಬೇಕಾಗುತ್ತದೆ.

ಇದರ ಬಗ್ಗೆ ನಮ್ಮ ನಾಯಕರ ಜತೆ ಚರ್ಚಿಸಿ ಹೊರಾಟ ಮಾಡುತ್ತೇವೆ. ಈ ವಿಚಾರದಲ್ಲಿ ಗೃಹ ಸಚಿವರು ಕೈಚೆಲ್ಲಿ ಕೂತಿದ್ದಾರೆ. ಹೀಗಾಗಿ ನೀವು ಅತ್ಯಾಚಾರವನ್ನಾದರೂ ಮಾಡಬಹುದು, ದೂರು ಕೊಟ್ಟರೆ ಅದನ್ನು ದಾಖಲಿಸಿ ಇಟ್ಟುಕೊಳ್ಳುತ್ತೇವೆ, ಹೋಗಕ್ಕೆ ಬರಕ್ಕೆ ಪೊಲೀಸ್ ರಕ್ಷಣೆ ನೀಡುತ್ತೇವೆ ಎನ್ನುವಂತಾಗಿದೆ. ಈ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ ಎಂದು ಸುರೇಶ್ ಟೀಕಿಸಿದರು.

ಎದುರಿಗೆ ಸಿಕ್ಕಾಗ ಹೇಳ್ತೀನಿ: ಆಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ. ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಮಾಧ್ಯಮಗಳ ಮುಂದೆ ಹೇಳುವುದಿಲ್ಲ. ಅವರಿಗಿಂತ ಹತ್ತರಷ್ಟು ಮಾತನಾಡಲು ನನಗೂ ಬರುತ್ತದೆ. ಕನಕಪುರಕ್ಕೆ ಬಂದಾಗ ನೋಡಿಕೊಳ್ಳುತ್ತೇವೆ. ಕನಕಪುರಕ್ಕಾದರೂ ಬರಲಿ, ಬೆಂಗಳೂರಿಗಾದರೂ ಬರಲಿ. ಬಂದಾಗ ನೋಡೋಣ ಎಂದು ಪ್ರತಿಕ್ರಿಯಿಸಿದರು.

ಈ ಸರಕಾರ ನಿಯಂತ್ರಿಸುತ್ತಿರುವುದು ಯಾರು? ಅವರೇ ಹೇಳಿದ್ದಾರೆ, ಈ ಸರಕಾರ ಉಳಿಸಿರೋರು ನಾವು, ತೆಗೆಯೋರು ನಾವು ಅಂತಾ ಅವರೇ ಹೇಳಿದ್ದಾರೆ. ಹೀಗಿರುವಾಗ ಬೇರೆ ಯಾರ ಬಳಿ ರಕ್ಷಣೆ ಕೇಳುತ್ತೀರಿ? ಸರಕಾರವನ್ನು ಇವರ ಕೈಗೊಂಬೆಯಾಗಿ ಆಟವಾಡಿಸುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ನನಗೆ ಬೇಜಾರು ಏನಂದರೆ ರಾಜ್ಯದ ಜನರಿಗೆ ಎರಡು ತೋರಿಸುತ್ತಿದ್ದೀರಿ. ಒಂದು ಬಟ್ಟೆ ಹಾಕಿರೋದು, ಮತ್ತೊಂದು ಬಟ್ಟೆ ಬಿಚ್ಚಿರೋದು. ಆ ಬಟ್ಟೆ ಬಿಚ್ಚಿದ ವ್ಯಕ್ತಿ ಮನೆಮುಂದೆ ಹೋಗಿ ನಿಂತು ಕೇಳುತ್ತೀರಲ್ಲಾ ಅದೇ ಬೇಸರ ಎಂದು ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಎಲ್ಲವನ್ನೂ ಎಡಿಟ್ ಮಾಡಲಾಗಿದೆ ಎಂದು ಹೇಳ್ತೀರಿ. ನಾವು ಮಾತನಾಡುವುದನ್ನು ಎಡಿಟ್ ಮಾಡುತ್ತೀರಿ. ಹಾಗೆಂದ ಮಾತ್ರಕ್ಕೆ ನಾನು ಮಾತನಾಡಿರುವುದು ನಕಲಿ ಆಗುತ್ತಾ? ನನ್ನ ಮಾತು, ಹಾವಭಾವವನ್ನು ನಕಲಿ ಎನ್ನಲು ಸಾಧ್ಯವೇ? ಆ ಮಟ್ಟಿಗೆ ತಂತ್ರಜ್ಞಾನ ಬಂದಿದೆಯೇ? ಮಾಧ್ಯಮಗಳಿಗೇ ಗೊತ್ತಿರಬೇಕು ಎಂದು ಅವರು ತಿಳಿಸಿದರು.

ಷಡ್ಯಂತ್ರ ಎಂದು ಹೇಳುತ್ತೀರಾ? ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಇಲ್ಲ, ಶಿವಕುಮಾರ್ ಅವರು ಹೋಗಿ ಬಟ್ಟೆ ಬಿಚ್ಚಿದ್ರಾ? ಷಡ್ಯಂತ್ರ ಆಗಿದ್ದು ಇಡೀ ಜಗತ್ತಿಗೆ ಗೊತ್ತಿದೆ. ಕಷ್ಟ ಅಂತಾ ನನ್ನ ಬಳಿನೂ ಸಾಕಷ್ಟು ಜನ ಬರುತ್ತಾರೆ. ಅವರಿಗೆ ಸಹಾಯ ಮಾಡೋದು ನಮ್ಮ ಧರ್ಮ. ಯಾರೋ ಸಂತ್ರಸ್ತೆ ಬಂದು ತೊಂದರೆ ಆಗಿದೆ ಅಂತಾ ನಿಮ್ಮ ಮಾಧ್ಯಮದ ಮುಂದೆ ಬಂದೆರೆ, ನೀವು ಎಳೆಎಳೆಯಾಗಿ ಎಲ್ಲ ಮಾಹಿತಿ ಬಿಚ್ಚುತ್ತೀರಿ. ಅದು ನಿಮ್ಮ ತಪ್ಪು ಎಂದು ಹೇಳಲು ಸಾಧ್ಯವೇ? ನೀವು ಮಾಡ್ತೀರೋ ಇಲ್ವೋ? ನಿಮ್ಮ ಕೆಲಸ ನೀವು ಮಾಡ್ತೀರಿ, ರಾಜಕೀಯದವರ ಕೆಲಸ ರಾಜಕೀಯದವರು ಮಾಡ್ತಾರೆ. ಅವರು ಕನಕಪುರಕ್ಕೆ ಬಂದರೆ ನಾವ್ಯಾರು ಸ್ವಾಗತ ಮಾಡಲ್ಲ. ನಮ್ಮ ಊರಿನಲ್ಲಿರುವವರು ಸ್ವಾಗತ ಮಾಡ್ತಾರೆ ಎಂದು ಸುರೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News