ದೂರು ನೀಡಿದ ದಿನದಿಂದ ಪ್ರಾಣ ಬೆದರಿಕೆ ಬರುತ್ತಿವೆ: ಯುವತಿ ಪರ ವಕೀಲ ಜಗದೀಶ್ ಆರೋಪ

Update: 2021-03-28 16:05 GMT

ಬೆಂಗಳೂರು, ಮಾ. 28: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ನಾಳೆ(ಮಾ.29) ನ್ಯಾಯಾಲಯದ ಮುಂದೆ ಹಾಜರಾಗಿ, ತನ್ನ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ ಎಂದು ಯುವತಿ ಪರ ವಕೀಲ ಜಗದೀಶ್ ಕೆ.ಎನ್.ಮಹಾದೇವ್ ತಿಳಿಸಿದ್ದಾರೆ.

ರವಿವಾರ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸಿ, ಮಾಹಿತಿ ಹಂಚಿಕೊಂಡಿರುವ ಅವರು, ಸಿಡಿ ಪ್ರಕರಣದಲ್ಲಿ ಒಂದು ಕಡೆ ಅತ್ಯಾಚಾರ ಪ್ರಕರಣ, ಮತ್ತೊಂದೆಡೆ ಸುಲಿಗೆ ಪ್ರಕರಣ ದಾಖಲಾಗಿವೆ. ಈ ಎರಡೂ ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದರು.

ಈ ಪ್ರಕರಣ ದಾಖಲಾದ ನಂತರ ಪೋಷಕರಿಗೆ ಭದ್ರತೆ ಒದಗಿಸುವಂತೆ ಕೋರಲಾಗಿತ್ತು. ಆದರೆ, ಈ ಬಗ್ಗೆ ಸಿಟ್(ವಿಶೇಷ ತನಿಖಾ ದಳ) ಗಮನಹರಿಸಿಲ್ಲ. ಮತ್ತೊಂದೆಡೆ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಯುತವಾದ ತನಿಖೆ ಆಗಿಲ್ಲ.ಪೊಲೀಸರು ರಾಜಕಾರಣಿಗಳಿಗೆ ತಮ್ಮ ತಲೆ ಬಗ್ಗಿಸಿದ್ದಾರೆ ಎನ್ನುವ ಸಂಶಯ ಬಂದಿದೆ ಎಂದು ಆರೋಪಿಸಿದರು.

ಪ್ರಾಣ ಬೆದರಿಕೆ: ಯುವತಿಗೆ ನ್ಯಾಯ ಒದಗಿಸಲು ನಾವು ಬದ್ಧರಾಗಿದ್ದೇವೆ. ಆದರೆ, ದೂರು ನೀಡಿದ ದಿನದಿಂದ ಅನೇಕರು ನನ್ನ ಮೊಬೈಲ್‍ಗೆ ಸಂಪರ್ಕಿಸುತ್ತಿದ್ದು, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಶನಿವಾರ ರಾತ್ರಿಯೂ ಯುವಕನೋರ್ವ ಇಂಟರ್‍ನೆಟ್ ಕರೆ ಮೂಲಕ ಸಂಪರ್ಕಿಸಿ ‘ನಿಮ್ಮ ತಲೆ ಕಡಿಯುತ್ತೇವೆ’ ಎಂದು ಹೆದರಿಸಿದ್ದಾನೆ ಎಂದು ಜಗದೀಶ್ ದೂರಿದರು.

ಬೆದರಿಕೆ ಕರೆಗಳು ಮಾತ್ರವಲ್ಲದೆ, ಕೆಲ ಅಪರಿಚಿತ ವ್ಯಕ್ತಿಗಳು ನಮ್ಮನ್ನು ರಾತ್ರಿ ವೇಳೆ ಹಿಂಬಲಿಸುತ್ತಿದ್ದಾರೆ ಎಂದ ಅವರು, ಈ ಪ್ರಕರಣದಲ್ಲಿ ನಾವು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ಆದರೆ, ಯುವತಿ ಪರ ಇರುವ ವಕೀಲರಿಗೆ ಈ ರೀತಿಯ ಬೆದರಿಕೆ ಕರೆಗಳು ಬಂದಿವೆ. ಹೀಗಿರುವಾಗ, ಸಂತ್ರಸ್ತೆ ನ್ಯಾಯಾಲಯ ಅಥವಾ ತನಿಖಾಧಿಕಾರಿಗಳ ಮುಂದೆ ಹಾಜರಾದರೆ, ರಕ್ಷಣೆ ದೊರೆಯಲಿದೆಯೇ ಎಂದು ಪ್ರಶ್ನಿಸಿದರು.

ಇದೇ ವೇಳೆ ಹಿರಿಯ ನ್ಯಾಯವಾದಿ ಮಂಜುನಾಥ್ ಮಾತನಾಡಿ, ನ್ಯಾಯಾಲಯದಲ್ಲಿ ಇನ್–ಕ್ಯಾಮೆರಾ ಪ್ರಕ್ರಿಯೆ ನಡೆಯಲಿದ್ದು, ಯುವತಿಯ ಹೇಳಿಕೆಗಳು ದಾಖಲಾಗಲಿವೆ. ಆರೋಪಿ ಮತ್ತು ಸಂತ್ರಸ್ತೆ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ನುಡಿದರು.

ಮತ್ತೇ ನೋಟಿಸ್?: ಸಿಡಿ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪುನಃ ಯುವತಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಘಟನೆ ಸಂಬಂಧ ಸ್ಥಳ ಮಹಜರು, ವೈದ್ಯಕೀಯ ಪರೀಕ್ಷೆ ಮತ್ತು ಸಂತ್ರಸ್ತೆಯ ಹೇಳಿಕೆ ಅತ್ಯಗತ್ಯವಾಗಿರುವ ಹಿನ್ನೆಲೆ ತಪ್ಪದೆ, ವಿಚಾರಣೆಗೆ ಹಾಜರಾಗುವಂತೆ ಉಲ್ಲೇಖಿಸಿ, ವಕೀಲರ ಮೂಲಕವೇ ಆಕೆಗೆ ಇಲ್ಲಿನ ಕಬ್ಬನ್‍ಪಾರ್ಕ್ ಠಾಣಾ ಪೊಲೀಸರು ನೋಟಿಸ್ ನೀಡಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News