×
Ad

ರಾಮನ ರಾಜ್ಯವೋ, ರಾವಣನ ರಾಜ್ಯವೋ ಎಂಬ ಸಂಶಯ ಮೂಡುತ್ತಿದೆ: ವಿ.ಎಸ್.ಉಗ್ರಪ್ಪ

Update: 2021-03-28 22:35 IST

ಬೆಂಗಳೂರು, ಮಾ.28: ಮರ್ಯಾದಾಪುರುಷ, ಏಕಪತ್ನಿ ವ್ರತಸ್ಥ ಶ್ರೀರಾಮನ ದೇವಸ್ಥಾನವನ್ನು ನಿರ್ಮಾಣ ಮಾಡಲು ಅಯೋಧ್ಯೆಯಲ್ಲಿ ಪ್ರಾರಂಭಿಸಿದ್ದಾರೆ. ಆದರೆ, ದೇವಸ್ಥಾನ ನಿರ್ಮಾಣದ ಮೊದಲ ವರ್ಷದಲ್ಲೇ ಕರ್ನಾಟಕದಲ್ಲಿ ಒಂದು ಹೆಣ್ಣು ಮಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನೋಡಿದರೆ ರಾಮನ ರಾಜ್ಯವೋ, ರಾವಣನ ರಾಜ್ಯವೋ ಎಂಬ ಸಂಶಯ ಮೂಡುತ್ತಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಸಂಕೇತ್ ಏಣಗಿ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದು ಹೋಳಿ ಜೊತೆಗೆ ಕಾಮದಹನ ಕೂಡ ಇದೆ. ರಾಜ್ಯದಲ್ಲಿ ಕಾಮ-ಕ್ರೋಧಗಳು ತಾಂಡವಾಡುತ್ತಿದೆ, ಅದನ್ನು ದಹನ ಮಾಡುವಂತಾಗಲಿ ಎಂದು ಲೇವಡಿ ಮಾಡಿದರು.

ನಿರ್ಭಯಾ ಪ್ರಕರಣ ವರದಿ ಇರಬಹುದು, ಅಥವಾ ನನ್ನ ನೇತೃತ್ವದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿ ನೀಡಿದ ಆರು ಸಾವಿರ ಪುಟದ ವರದಿಯಲ್ಲಿ ಇಂಥ ಸಂದರ್ಭದಲ್ಲಿ ಪೊಲೀಸರು ಯಾವ ರೀತಿ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಪ್ರತಿನಿತ್ಯ ಆ ಹೆಣ್ಣುಮಗಳು ತನಗೆ ರಕ್ಷಣೆ ಇಲ್ಲ, ಕುಟುಂಬದವರಿಗೆ ರಕ್ಷಣೆ ಇಲ್ಲವೆಂದು ಹೇಳುತ್ತಿದ್ದಾಳೆ. ರಾಜ್ಯದಲ್ಲಿ ಕಾನೂನು ಪರಿಪಾಲನೆ ಇದ್ದಿದ್ದೇ ಆದರೆ ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಾಗ ಏಕೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ಎಫ್‍ಐಆರ್ ದಾಖಲಾಗಾದೇ ಸರಕಾರ ಎಸ್‍ಐಟಿ ರಚನೆಯನ್ನು ಹೇಗೆ ಮಾಡಿದರು? ಆ ವ್ಯಕ್ತಿ ಬೆಂಗಳೂರಿನಲ್ಲೇ ಇದ್ದರೂ ಬೇರೆ ವ್ಯಕ್ತಿ ಕೈಯಲ್ಲಿ ಹೇಗೆ ದೂರು ಕೊಡಿಸಿದಿರಿ? ಆ ಯುವತಿಯ ಪೋಷಕರು ಬಿಜಾಪುರ ಮೂಲದವರಾಗಿದರೂ, ಬೆಳಗಾವಿಗೆ ಕರೆದುಕೊಂಡು ಹೋಗಿ ಅಲ್ಲಿ ದೂರು ಕೊಡಿಸಿದ್ದು ಯಾಕೆ? 376 ಕೇಸ್ ದಾಖಲಾಗಿದ್ದರೆ ಸಾಮಾನ್ಯ ವ್ಯಕ್ತಿಗಳನ್ನು ಸುಮ್ಮನೇ ಬಿಡುತ್ತಿದ್ದರಾ? ಎಂದು ಖಾರವಾಗಿ ಪ್ರಶ್ನಿಸಿದರು.

ಆ ಯುವತಿಗೆ ಯಾವ ಸಂಪರ್ಕ ಇರಲಿಲ್ಲ ಎಂದು ನಮ್ಮ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 376 ಅಡಿಯಲ್ಲಿ ಆರೋಪಿಯಾಗಿರುವ ವ್ಯಕ್ತಿಯನ್ನು ಎಸ್‍ಐಟಿ ಮೊದಲು ಬಂಧಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಸಿಜೆ ಮೇಲುಸ್ತುವಾರಿಯಲ್ಲಿ ತನಿಖೆಯಾಗಲಿ

ರಮೇಶ್ ಜಾರಕಿಹೊಳಿ ವಿರುದ್ಧದ ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಅವರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಸಂತ್ರಸ್ತ ಯುವತಿಗೆ ನ್ಯಾಯ ಸೀಗಬೇಕು. ಎಸ್‍ಐಟಿ ತನಿಖೆಯನ್ನು ಈ ಕೂಡಲೇ ಕೈಬಿಡಬೇಕು.’

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ 

ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ

‘ಪೊಲೀಸ್ ಮತ್ತು ಸರಕಾರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ರಕ್ಷಣೆಗೆ ನಿಂತಿದೆ. ಕೂಡಲೇ ಅವರನ್ನ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ. ಮೂರು ಕ್ಷೇತ್ರಗಳಲ್ಲಿ ಸೋಲುತ್ತೇವೆ ಎಂದು ಗೊತ್ತಾಗಿದೆ. ಅದಕ್ಕಾಗಿ ರಾಜಕೀಯ ಷಡ್ಯಂತ್ರ ಮಾಡ್ತಿದ್ದಾರೆ.’

-ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ

ಡಿಜೆ ಹಳ್ಳಿ-ರಮೇಶ್ ಪ್ರಕರಣದಲ್ಲಿ ತಾರತಮ್ಯ

ರಮೇಶ್ ಜಾರಕಿಹೊಳಿ ವಿರುದ್ಧ 376 ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದರೂ ಬಹಿರಂಗವಾಗಿ ಸುದ್ದಿಗೋಷ್ಠಿಯನ್ನು ನಡೆಸುತ್ತಿದ್ದಾರೆ. ಸಾಮಾನ್ಯ ಡಿಜೆ ಹಳ್ಳಿ ಪ್ರಕರಣ ಆದಾಗ ಯಾವ ತರಹ ತನಿಖೆ ಮಾಡಿದರು. ರಮೇಶ್ ಮೇಲೆ ಎಫ್‍ಐಆರ್ ಆದಾಗ ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ.’

-ದಿವಾಕರ್, ಕೆಪಿಸಿಸಿ ವಕ್ತಾರ

ಆರೋಪಿಗೆ ಜೈಲು ಶಿಕ್ಷೆ ಗ್ಯಾರಂಟಿ

‘ರಮೇಶ್ ಜಾರಕಿಹೊಳಿಗೆ ಜೈಲು ಶಿಕ್ಷೆ ಆಗಿಯೇ ಆಗುತ್ತದೆ, ಅದರಲ್ಲಿ ಎರಡು ಮಾತಿಲ್ಲ. ಸಂತ್ರಸ್ತ ಯುವತಿಯ ಹೇಳಿಕೆಯನ್ನು ಪಡೆದುಕೊಂಡು ಆರೋಪಿಯನ್ನು ಬಂಧಿಸಬೇಕು. ಸಂತ್ರಸ್ತೆಯದು ಯಾವುದೇ ತಪ್ಪಿಲ್ಲ ಎಂದು ಈಗಾಗಲೇ ಮೇಲ್ನೋಟಕ್ಕೆ ಗೋತ್ತಾಗಿದೆ. ಯುವತಿಗೆ ನ್ಯಾಯ ಕೊಡಿಸುವ ಅಗತ್ಯತೆಯಿದೆ.’

-ಬ್ರಿಜೇಶ್ ಕಾಳಪ್ಪ, ಕಾಂಗ್ರೆಸ್ ವಕ್ತಾರ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News