ಅಧಿಕಾರ ಇಲ್ಲದಿದ್ದರೂ ಅನ್ಯಾಯದ ವಿರುದ್ಧದ ಹೋರಾಟಗಳಲ್ಲಿ ಜೊತೆಗಿರುತ್ತೇನೆ: ಸಿದ್ದರಾಮಯ್ಯ
ಕೋಲಾರ,ಮಾ.28: ರಾಜ್ಯ ಸರ್ಕಾರ ಹಿಂದುಳಿದ ಜಾತಿಗಳ ಶಾಶ್ವತ ಆಯೋಗದಿಂದ ನಡೆಸಿರುವ ಜಾತಿವಾರು ಜನಗಣತಿ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಇರುವ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಕೂಡಲೇ ಸ್ವೀಕರಿಸಿ ಚರ್ಚೆಗೆ ಒಳಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ರವಿವಾರ ಕೋಲಾರದ ಗಾಂಧೀವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಪ್ರಬಲ ಜಾತಿಗಳನ್ನು 2ಎ ಮೀಸಲಾತಿ ವರ್ಗಕ್ಕೆ ಸೇರಿಸುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಇದಕ್ಕೆ ನಮ್ಮ ವಿರೋಧ ಖಂಡಿತಾ ಇಲ್ಲ. ಶೋಷಿತ ಸಮುದಾಯಗಳು ಮೀಸಲಾತಿ ಪಡೆಯುವುದು ಅವುಗಳ ಸಂವಿಧಾನ ಬದ್ಧ ಹಕ್ಕು. ಯಾವ ಸಮುದಾಯಗಳು ಸಂವಿಧಾನದ ನಿಯಮಗಳಡಿ ಮೀಸಲಾತಿಗೆ ಅರ್ಹವಿದೆಯೋ ಆ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ನೀಡಲು ಕ್ರಮ ವಹಿಸಬೇಕು. ಆದರೆ, ಅದನ್ನು ನಿರ್ಧರಿಸುವ ಮುನ್ನ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆ ನಡೆಸಿ ವರದಿ ಪಡೆದ ನಂತರ ಮಾಡಬೇಕು. ಸರ್ಕಾರ ನೇರವಾಗಿ ಇನ್ನಾವುದೇ ಪ್ರತ್ಯೇಕ ಸಮಿತಿಯನ್ನು ರಚಿಸುವ ಮೂಲಕ ಮೀಸಲಾತಿ ನಿಗದಿಪಡಿಸಿದರೆ ಅದು ಸರ್ವೋಚ್ಚ ನ್ಯಾಯಾಲಯದ ಐದು ನ್ಯಾಯಾಧೀಶರ ಪೀಠ ನೀಡಿರುವ ಈ ಹಿಂದಿನ ತೀರ್ಪಿನ ಉಲ್ಲಂಘನೆ ಅಲ್ಲದೆ ಸಂವಿಧಾನ ವಿರೋಧಿ ತೀರ್ಮಾನವಾಗಲಿದೆ ಎಂದರು.
ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧಿಸಿದ ಮಂಡಲ್ ಆಯೋಗ 1980ರಲ್ಲಿ ಅಂತಿಮ ವರದಿ ಸಲ್ಲಿಸಿದರೂ 1991ರಲ್ಲಿ ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಸರ್ಕಾರ ಮಂಡಲ್ ವರದಿಯನ್ನು ಜಾರಿಗೆ ತರುವ ಮೂಲಕ ಹಿಂದುಳಿದ ಜಾತಿಗಳಿಗೆ ಶೇ.27 ಮೀಸಲಾತಿ ನಿಗದಿ ಮಾಡಿತು. ಸ್ವಾತಂತ್ರ್ಯ ನಂತರದಿಂದ ಈವರೆಗೆ ಸಮಾಜದ ವಿವಿಧ ಸಮುದಾಯಗಳಲ್ಲಾದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಲು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಅನುಕೂಲವಾಗಲಿದೆ ಎಂದು ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು ನಗರದ ಶೇ.90 ಹಾಗೂ ರಾಜ್ಯದ ಗ್ರಾಮೀಣ ಭಾಗದ ಶೇ.100 ರಷ್ಟು ಕುಟುಂಬಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಇರುವ ವೈಜ್ಞಾನಿಕ ಸಮೀಕ್ಷೆ ನಡೆಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತ ಬಂದಿದೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಈ ವರೆಗೆ ಸ್ವೀಕರಿಸದಿರುವುದು ಖಂಡನೀಯ. ಸರ್ಕಾರ ತಕ್ಷಣ ವರದಿ ಸ್ವೀಕರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಲಿಂಗಾಯಿತರು ಒಕ್ಕಲಿಗರಿಗೆ ನಿಗಮ ಸ್ಥಾಪನೆ ಮಾಡಿರುವುದು ಸ್ವಾಗತಾರ್ಹ ಆದರೆ, ಆ ಸಮುದಾಯಗಳಿಗೆ ತಲಾ 500 ಕೋಟಿ ಅನುದಾನ ನೀಡಿ ಉಳಿದೆಲ್ಲಾ ಹಿಂದುಳಿದ ಜಾತಿಗಳಿಗೆ 500 ಕೋಟಿ ನೀಡಿರುವುದು ಯಾವ ನ್ಯಾಯ, ಈ ರೀತಿಯ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ, ಈ ಅನ್ಯಾಯದ ವಿರುದ್ಧ ಜನ ಬೀದಿಗೆ ಬರಬೇಕಿದೆ. ಎಲ್ಲಾ ಜಾತಿಯ ಬಡವರು, ಹಿಂದುಳಿದವರು ಒಟ್ಟಿಗೆ ಸೇರಿ ಹೋರಾಟ ಮಾಡಬೇಕಾಗಿದೆ. ಅನ್ಯಾಯದ ವಿರುದ್ಧ ಹೋರಾಟಗಳಲ್ಲಿ ನಾನು ಅಧಿಕಾರ ಇರಲಿ ಬಿಡಲಿ ಹೋರಾಟಕ್ಕೆ ನೈತಿಕವಾಗಿ ಬೆಂಬಲಕ್ಕೆ ಇರುತ್ತೇನೆ ಎಂದು ಹೇಳಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಬರೀ ಸುಳ್ಳುಗಳನ್ನೇ ಹೇಳುತ್ತಿದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಹೇಳುವ ಸರ್ಕಾರ ಯಾವುದೇ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮಾಜಗಳ ವಿಕಾಸ ಮಾಡುತ್ತಿಲ್ಲ. ಬದಲಿಗೆ ಚೌಕಿದಾರನೆಂದು ಹೇಳಿಕೊಂಡು ಅಂಬಾನಿ ಅದಾನಿಗಳಿಗೆ ಚೌಕೀದಾರನ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ. ಮಾತೆತ್ತಿದರೆ ನನಗೆ 56 ಇಂಚಿನ ಎದೆ ಎಂದು ಹೇಳುತ್ತಾರೆ, ಆದರೆ, ಆ ಎದೆಯ ಒಳಗೆ ಬಡವರ ಪರವಾದ ಹೃದಯವಂತಿಕೆ ಇದೆಯಾ ಎಂದು ಪ್ರಶ್ನಿಸಿದರು.
ಇಂದು ದೇಶದಲ್ಲಿ ಹಣ್ಣು, ತರಕಾರಿ, ದಿನಸೀ ಪದಾರ್ಥಗಳಿಂದ ಹಿಡಿದು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದಾಗಿ, ಸಾಮಾನ್ಯ ಜನರು ಬದುಕಲಾರದ ಪರಿಸ್ಥಿತಿಗೆ ದೂಡಲ್ಪಟ್ಟಿದ್ದಾರೆ. ಇಷ್ಟಾದರೂ ಮೋದಿಯವರು ನಾ ಖಾವುಂಗಾ ನಾ ಖಾನೇ ದೂಂಗಾ ಎಂದು ಹೇಳ್ತಾ ಇದ್ದಾರೆ. ಇತ್ತ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡದೆ ಕೋವಿಡ್ ಕಾರಣ ನೀಡಿ ಮಕ್ಕಳ ಅನುದಾನವನ್ನೂ ನಿಲ್ಲಿಸಿಬಿಟ್ಟಿದೆ. ಇಂಥ ಮಾನಗೆಟ್ಟವರನ್ನು ನಾನೆಂದೂ ನೋಡಿರಲಿಲ್ಲ ಎಂದು ದೂರಿದರು.
ಸಮಾರಂಭದಲ್ಲಿ ಮಾಜಿ ಸ್ಪೀಕರ್ ಕೆ.ಅರ್.ರಮೇಶ್‍ಕುಮಾರ್, ಮಾಜಿ ಸಭಾಪತಿ ವಿ.ಅರ್.ಸುದರ್ಶನ್, ಮಾಜಿ ಸಚಿವ ನಸೀರ್ ಅಹಮದ್, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ಸಚಿವ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಮಹಾಪೌರ ರಾಮಚಂದ್ರಪ್ಪ, ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪ್ರೊ. ನರಸಿಂಹಯ್ಯ, ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಸಾದ್ ಬಾಬು, ಪಾಲ್ಗುಣ, ಕಲಾವಿದ ವಿಷ್ಣು, ಜನಾಧಿಕಾರ ಸಂಘಟನೆಯ ಹೂವರಸನಹಳ್ಳಿ ರಾಜಪ್ಪ, ಅಹಿಂದ ಮುಖಂಡ ಗುಟ್ಟಹಳ್ಳಿ ರವಿಕುಮಾರ್ ಮುಂತಾದವರು ಇದ್ದರು.