ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಆಗ್ರಹ

Update: 2021-03-29 16:20 GMT

ಕಲಬುರಗಿ, ಮಾ.29: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಗಾವಲು ವಾಹನದ ಮೇಲೆಯೇ ಚಪ್ಪಲಿ, ಕಲ್ಲು ತೂರಾಟ ನಡೆಸುವಷ್ಟು ವ್ಯವಸ್ಥೆ ಕೆಟ್ಟು ಹೋಗಿದೆ. ಹೀಗಾಗಿ, ಈ ಬಿಜೆಪಿ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಬೇಕೆಂದು ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಒತ್ತಾಯಿಸಿದ್ದಾರೆ.  

ಸೋಮವಾರ ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನೇ ಬೀಳಿಸಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತಂದಿದ್ದೇನೆ, ಈ ಸಿಡಿ ಪ್ರಕರಣವೇನು ಮಹಾ ಎನ್ನುವಂಥ ಹೇಳಿಕೆಯನ್ನು ನೀಡುವ ಮೂಲಕ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕಿದ್ದು, ಕಾನೂನು ಸುವ್ಯವಸ್ಥೆ ಕೂಡ ಹಾಳಾಗಿ ಹೋಗಿದೆ. ಹೀಗಾಗಿ, ಈ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು. 

ಸಂತ್ರಸ್ತ ಯುವತಿ ತನಗೆ ಜೀವ ಬೆದರಿಕೆ ಇದೆ ಎಂದು ಹೇಳುತ್ತಿದ್ದಾರೆ. ರಮೇಶ್ ವಿರುದ್ಧ 376(ಸಿ) ಅಡಿ ದೂರು ದಾಖಲಾಗಿದೆ. ಇದೇ ಐಪಿಸಿ ಸೆಕ್ಷನ್‍ಗಳ ಅಡಿ ಸಾಮಾನ್ಯ ಜನರ ಮೇಲೆ ದೂರು ದಾಖಲಾಗಿದ್ದರೆ ಇಷ್ಟೊತ್ತಿಗಾಗಲೇ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸುತ್ತಿದ್ದರು. ಆದರೆ, ರಾಜ್ಯ ಸರಕಾರ ರಮೇಶ್ ರಕ್ಷಣೆಗೆ ನಿಂತಿದ್ದು, ಈ ಸರಕಾರಕ್ಕೆ ಯಾವುದೇ ಮಾನಮರ್ಯಾದೆ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ರಮೇಶ ಜಾರಕಿಹೊಳಿ ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಎಸ್‍ಐಟಿಗೆ ಯಾವುದೇ ಅಧಿಕಾರ ಕೊಟ್ಟಿಲ್ಲ. ಎಸ್‍ಐಟಿ ತಂಡ ಇದ್ದರೂ ಯುವತಿಯನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಿಲ್ಲ. ಎಸ್‍ಐಟಿ ತನಿಖೆ ಮೇಲೆಯೇ ನಮಗೆ ಸಂಶಯ ಮೂಡುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕಿ ಕನೀಜ್ ಫಾತೀಮಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮನಕೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ್ ರಾಠೋಡ್, ಶರಣು ಮೋದಿ ಉಪಸ್ಥಿತರಿದ್ದರು.

ಇದು ಲಂಚ ಮಂಚದ ಸರಕಾರನಾ?

ಶಾಸಕರು ಮುಂಬೈಯಲ್ಲಿ ಇದ್ದಾಗ ಏನೇನು ನಡೆದಿದೆ ಯಾರಿಗೆ ಗೊತ್ತು? ಬಿಜೆಪಿಯವರೇ ಆದ ಬಾಲಚಂದ್ರ ಜಾರಕಿಹೊಳಿ ಹನಿ ಟ್ಯ್ರಾಪ್ ಎನ್ನುತ್ತಾರೆ. ರಮೇಶ್ ಈ ಸಿಡಿಯಲ್ಲಿ ಇರೋದು ನಾನಲ್ಲ ಎನ್ನುತ್ತಾರೆ. ಹಾಗಾದರೆ, ಇರದ ಹಿಂದೆ ಇರೋದು ಯಾರು? ಇದು ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡುವ ಒಂದು ಭಾಗನಾ? ಈ ಸರಕಾರದಲ್ಲಿ ಅಭಿವೃದ್ಧಿಗೆ ದುಡ್ಡು ಕೇಳಬೇಕಾದರೆ ಲಂಚ ಕೊಡಬೇಕು. ಕೆಲಸ ಏನಾದರೂ ಆಗಬೇಕೆಂದರೆ ‘ಮಂಚ’ ಹತ್ತಬೇಕು. ಇದೇನು ಲಂಚ, ಮಂಚದ ಸರಕಾರನಾ ಎಂದು ಗೊತ್ತಾಗುತ್ತಿಲ್ಲ.

-ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News