ರಮೇಶ್ ಜಾರಕಿಹೊಳಿ ಬಂಧನಕ್ಕೆ ಪಟ್ಟು: ರಾಜ್ಯದ ಹಲವೆಡೆ ಪಂಜಿನ ಮೆರವಣಿಗೆ, ಪ್ರತಿಕೃತಿ ದಹನ

Update: 2021-03-29 17:52 GMT

ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಆಗ್ರಹಿಸಿ ಪಂಜಿನ ಮೆರವಣಿಗೆ, ರಸ್ತೆ ತಡೆ, ಪ್ರತಿಕೃತಿ ದಹಿಸುವ ಮೂಲಕ ಕಾಂಗ್ರೆಸ್ ಮುಖಂಡರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. 

ಚಿಕ್ಕಮಗಳೂರು: ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ರಮೇಶ್ ಜಾರಕಿಹೊಳಿಯನ್ನು ಇನ್ನೂ ಬಂಧಿಸಲಿಲ್ಲವೆಂದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಮಾಜಿ ಅಧ್ಯಕ್ಷ ಡಾ.ವಿಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಿವಮೊಗ್ಗ: ಅತ್ಯಾಚಾರದ ಆರೋಪದಡಿ ರಮೇಶ್ ಜಾರಕಿಹೊಳಿಗೆ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಎನ್ಎಸ್ಯುಐ ವತಿಯಿಂದ ನಗರದ ಗೋಪಿ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.

ನಗರದ ಗೋಪಿ ವೃತ್ತದಿಂದ ಮಹಾವೀರ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ಎನ್‌ಎಸ್‌ಯು‌ಐ ಕಾರ್ಯಕರ್ತರು, ಪಂಜಿನ ಮೆರವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ಮುಖವಾಡ ಧರಿಸಿದ್ದ ವ್ಯಕ್ತಿಯ ಕೈಗೆ ಚೈನ್ ಕಟ್ಟಿ ಎಳೆತಂದರು. ಮೆರವಣಿಗೆ ಉದ್ದಕ್ಕೂ 'ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು' ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಮಾಜಿ ಸೂಡಾ  ಅಧ್ಯಕ್ಷರಾದ ಎನ್ ರಮೇಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಅಲ್ಪಸಂಖ್ಯಾತ ಕಾಂಗ್ರೆಸ್ ನ ನಗರಾಧ್ಯಕ್ಷ ನಿಯಾಲ್, ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ಚೇತನ್ ಗೌಡ, ಗ್ರಾಮಾಂತರ ಅಧ್ಯಕ್ಷ ಮನು, ಯುವ ಕಾಂಗ್ರೆಸ್ ನಾರ್ತ್ ಬ್ಲಾಕ್ ಉಪಾಧ್ಯಕ್ಷ  ಗಿರೀಶ್, ಎನ್‌ಎಸ್‌ಯು‌ಐ ಜಿಲ್ಲಾಧ್ಯಕ್ಷ ಬಾಲಾಜಿ, ಕಾರ್ಯಾಧ್ಯಕ್ಷ ರವಿ ಕಟ್ಟಿ ಕೆರೆ, ನಗರ ಅಧ್ಯಕ್ಷ ವಿಜಯ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಕಾಶ್, ಮುಬಾಸಿರ್, ಭರತ, ಪ್ರಸನ್ನ, ಪುರಲೆ ಮಂಜು, ಚಂದ್ರೋಜಿ ರಾವ್, ರವಿ ಸೇರಿ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಪ್ರತಿಭಟನೆ
ಮಂಡ್ಯ:
ಮಾಜಿ ಸಚಿವ ರಮೇಶ್ ಜಾರಿಕಿಹೊಳಿ ಬಂಧನಕ್ಕೆ ಆಗ್ರಹಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಿನ ಮೇಲೆ ಕಲ್ಲು ತೂರಿದ ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸಿದರು.

ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ಸೇರಿದಂತೆ ಹಲವೆಡೆ ರಸ್ತೆತಡೆ ನಡೆಸಿ ರಮೇಶ್ ಜಾರಿಕಿಹೊಳಿ ಪ್ರತಿಕೃತಿ ದಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪ, ಜಾರಕಿಹೊಳಿ, ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತನಗೆ ಅನ್ಯಾಯ ಆಗಿದೆ ಎಂದು ಹೇಳಿದ್ದಾರೆ. ಅತ್ಯಾಚಾರ ಆರೋಪಿಯಾದ ರಮೇಶ್ ಜಾರಕಿಹೊಳಿಯನ್ನು ಬಂಧಿಸದೆ ಸರಕಾರ ಆರೋಪಿಗೆ ರಕ್ಷಣೆ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಅತ್ಯಾಚಾರ ಹಗರಣದಲ್ಲಿ ಆರೋಪಿಯಾದ ರಮೇಶ್ ಜಾರಕಿಹೊಳಿ ಅವರನ್ನು ಕೂಡಲೇ ಬಂಧಿಸಬೇಕು. ಸಿಡಿ ಪ್ರಕರಣವನ್ನು ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಗೂಂಡಾಗಳಂತೆ ವರ್ತಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್‍ಕುಮಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಮದ್ದೂರಿನಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ನೇತೃತ್ವದಲ್ಲಿ ರಸ್ತೆತಡೆ ನಡೆಯಿತು. ಜಿಪಂ ಮಾಜಿ ಸದಸ್ಯ ಚಂದೂಪುರ ಪಾಪಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ತಾಪಂ ಸದಸ್ಯ ಚೆಲುವರಾಜು, ಪುರಸಭೆ ಮಾಜಿ ಅಧ್ಯಕ್ಷ ಅಮರ್‍ಬಾಬು, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಅಭಿಷೇಕ್, ಡಾಬಾ ಮಹೇಶ್, ನಾಗೇಗೌಡ, ಅಪ್ಪಾಜಿಗೌಡ, ಸತೀಶ್, ಇತರರು ಭಾಗವಹಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು. ಮಾಜಿ ಶಾಸಕ ರಮೇಶ್‍ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ಮಿತ್ರ ರಮೇಶ್, ಪುರಸಭಾ ಸದಸ್ಯ ದಿನೇಶ್, ದರ್ಶನ್, ಲಿಂಗರಾಜು, ಅರಕೆರೆ ಶಶಾಂಕ್, ಗುಣವಂತ, ಇತರರು ಪಾಲ್ಗೊಂಡಿದ್ದರು.

ಮೈಸೂರು: ಮಾಜಿ ಸಚಿವ ರಮೇಶ್ ಜಾರಿಕಹೊಳಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಸೋಮವಾರ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಬಳಗ, ನಗರ ಮತ್ತು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಾಸು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಗ್ರಾಮಾಂತರಕ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಸೇರಿದಂತೆ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ.ರಾಘವೇಂದ್ರ, ಶ್ರೀನಾರ್ಥ ಬಾಬು, ಕರ್ನಾಟಕ ರಾಜ್ಯ  ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್, ಕಾಂಗ್ರೆಸ್ ಮುಖಂಡರುಗಳಾದ ಈಶ್ವರ್ ಚಿಕ್ಕಡಿ, ಪಿ.ರಾಜು, ಭಾಸ್ಕರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಭವ್ಯ, ಮಾಲ, ಶಿವಪ್ರಸಾದ್, ಸೇರಿದಂತೆ ಹಲವರು  ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News