ಎ.7ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತ: ಕೋಡಿಹಳ್ಳಿ ಚಂದ್ರಶೇಖರ್

Update: 2021-03-30 11:40 GMT

ಬೆಂಗಳೂರು, ಮಾ.30: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯ ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳನ್ನು ರಾಜ್ಯ ಸರಕಾರ ನ್ಯಾಯಯುತವಾಗಿ ಈಡೇರಿಸದ ಕಾರಣ ಎ.7ರಿಂದ ಸಾರಿಗೆ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಮಂಗಳವಾರ ಗಾಂಧಿನಗರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಏಸ್ಮಾ ಜಾರಿ ಮಾಡಿದರೂ ನಾವು ಭಯ ಪಡುವುದಿಲ್ಲ. ಎ.7ರಿಂದ ಕರ್ನಾಟಕದಾದ್ಯಂತ ಬಸ್ ಸಂಚಾರ ಸ್ಥಗಿತವಾಗುವುದು ಶತಃಸಿದ್ಧ. ನಾಗರಿಕರೆಲ್ಲರೂ ಸಹಕರಿಸಬೇಕು ಎಂದು ಕೋರಿದರು.

ಎ.1ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ಸಾರಿಗೆ ಇಲಾಖೆ ನಮ್ಮನ್ನು ಆಹ್ವಾನಿಸಿದೆ. ಅಂದು ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ನಾವು ಮುಷ್ಕರ ಕೈ ಬಿಡಲು ಸಿದ್ಧ ಎಂದ ಅವರು, ಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.

7 ದಿನ 7 ರೀತಿ ಪ್ರತಿಭಟನೆ: ಎ.1ರಿಂದ 6ರವರೆಗೆ ಸಂಸ್ಥೆಯ ಎಲ್ಲ ನೌಕರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರು ಹಾಗೂ ಸರಕಾರದ ಗಮನ ಸೆಳೆಯಲಿದ್ದಾರೆ. ಎ.2ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಕಾಫಿ, ಟೀ ಮತ್ತು ಬಜ್ಜಿ, ಬೋಂಡಾಗಳನ್ನು ತಯಾರಿಸಿ ನೌಕರರು ಮಾರಾಟ ಮಾಡಲಿದ್ದಾರೆ.

ಅದೇ ರೀತಿ, ಎ.3ರಂದು ನೌಕರರು ಮತ್ತು ಕುಟುಂಬದ ಸದಸ್ಯರು ನಗರದ ಮುಖ್ಯ ವೃತ್ತಗಳಲ್ಲಿ ಮಾನವ ಸರಪಣಿ ನಿರ್ಮಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟಿಸಲಿದ್ದಾರೆ. ಎ.4ರಂದು ಸಾರ್ವಜನಿಕರಿಗೆ ಕರಪತ್ರ ಹಂಚುವುದು, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಬೇಡಿಕೆಗಳನ್ನು ಮಂಡಿಸಲಾಗುವುದು.

ಎ.5ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಎ.6ರಂದು ನೌಕರರ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.

ನೌಕರರು ಈ ಮೊದಲು ನಡೆಸಿದ ಪ್ರತಿಭಟನೆ ವೇಳೆ ಮಂಡಿಸಲಾಗಿದ್ದ, 9 ಬೇಡಿಕೆಗಳ ಪೈಕಿ 8 ಅನ್ನು ಈಡೇರಿಸಿರುವುದಾಗಿ ಸರಕಾರ ಹೇಳುತ್ತಿದೆ. ಆದರೆ, ಅವು ನ್ಯೂನ್ಯತೆಯಿಂದ ಕೂಡಿವೆ. ಆರನೆ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತಂತೆ ಈವರೆಗೆ ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ಸೇವೆಯ ಬೇಡಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಮಾಡಿ 2016ರ ಸುತ್ತೋಲೆಯನ್ನೆ ಮುಂದುವರಿಸಲಾಗಿದೆ. ಅಂತರ್ ನಿಗಮಗಳ ವರ್ಗಾವಣೆ ಪದ್ಧತಿ ವೈಜ್ಞಾನಿಕವಾಗಿ ಶಿಕ್ಷಕರ ಕೌನ್ಸಲಿಂಗ್ ಮಾದರಿಯಲ್ಲಿ ನಡೆಯಬೇಕೆಂದು ಕೇಳಲಾಗಿತ್ತು. ಹಲವಾರು ನಿಬಂಧನೆಗಳನ್ನು ಹಾಕಿ ಶೇ.2ರಷ್ಟು ವರ್ಗಾವಣೆಗೆ ಅವಕಾಶ ನೀಡಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಘಟಕಗಳಲ್ಲಿ ಆತ್ಮಹತ್ಯೆ ಪ್ರಯತ್ನಗಳು ಹೆಚ್ಚುತ್ತಿವೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News