×
Ad

ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ: ರಾಜಧಾನಿ ಬೆಂಗಳೂರಿನಲ್ಲಿ ಎ.1ರಿಂದ ಕಠಿಣ ನಿಯಮ ಜಾರಿ

Update: 2021-03-30 18:13 IST

ಬೆಂಗಳೂರು, ಮಾ.30: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆಯ ಪರಿಣಾಮ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಎ.1ರಿಂದ ಕಠಿಣ ನಿಯಮ ಜಾರಿಗೊಳಿಸಲು ತಯಾರಿ ಮಾಡಿಕೊಂಡಿದೆ.

ಮಂಗಳವಾರ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ವೈದ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವರ್ಚವಲ್ ಸಭೆ ನಡೆಸಿದ್ದಾರೆ. ಈ ವೇಳೆ ಎ.1ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಕೋವಿಡ್ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದು ಅಗತ್ಯ ಸಲಹೆ ನೀಡಿದ್ದಾರೆ.

ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಫೀವರ್ ಕ್ಲೀನಿಕ್, ಮೊಬೈಲ್ ಟೆಸ್ಟಿಂಗ್ ಕೇಂದ್ರ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಸ್ವಾಬ್ ಸಂಗ್ರಹಿಸುವ ವೇಳೆ ಸರಿಯಾದ ಮಾಹಿತಿ ಪಡೆಯಬೇಕು. ಇಲ್ಲದಿದ್ದರೆ ಕೋವಿಡ್ ಕೈ ಮೀರಿ ಹೋಗುವ ಅಪಾಯ ಎದುರಾಗಬಹುದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ವಲಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ವೈದ್ಯಾಧಿಕಾರಿಗಳು ಆಯಾ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ, ಸಲಹೆಗಳನ್ನು ನೀಡಬೇಕು. ಈ ವೇಳೆ ಅಧಿಕಾರಿಗಳಿಂದ ಕರ್ತವ್ಯ ಲೋಪ ಕಂಡುಬಂದರೆ ಅಮಾನತು ಮಾಡಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ. 

ಹೊರ ದೇಶಗಳಿಂದ ನಗರಕ್ಕೆ ಬಂದಿರುವವರ ನಿಖರವಾದ ಪಟ್ಟಿಯನ್ನು ಪಡೆದು, 7ನೇ ದಿನ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು. ಇದೇ ಮಾದರಿಯಲ್ಲಿಯೇ ಹೊರ ರಾಜ್ಯಗಳಿಂದ ಬರುವವರಿಗೂ ಮಾಡಬೇಕು. ಇದರ ಜೊತೆಗೆ ಬಸ್ ನಿಲ್ದಾಣ, ಮಾರುಕಟ್ಟೆ, ಮಾಲ್‍ಗಳು, ಮಾರುಕಟ್ಟೆ, ಮದುವೆ ಮಂಟಪ, ಚಿತ್ರಮಂದಿರ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಬೇಕೆಂದು ಅವರು ತಿಳಿಸಿದ್ದಾರೆ.

ಆರೋಗ್ಯ ಸಿಬ್ಬಂದಿ, ಅಧಿಕಾರಿಗಳ ಕರ್ತವ್ಯಗಳು

-ಸ್ವಾಬ್ ಸಂಗ್ರಹಿಸುವ ವೇಳೆ ಕಡ್ಡಾಯವಾಗಿ ವ್ಯಕ್ತಿಯ ನಿಖರವಾದ ಮೊಬೈಲ್ ಸಂಖ್ಯೆ, ವಿಳಾಸ ಹಾಗೂ ಪಿನ್‍ಕೋಡ್ ಸಂಗ್ರಹ ಮಾಡಿಕೊಳ್ಳಬೇಕು.

-ಔಷಧಿ ಮಳಿಗೆಗಳಲ್ಲಿ ಕೋವಿಡ್ ಸೋಂಕು ಲಕ್ಷಣಗಳಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಂಡು ಹೋಗಿರುವವರ ವಿವರಗಳನ್ನು ಪಡೆದುಕೊಳ್ಳಬೇಕು. ಹಾಗೂ ಅಂತವರಿಗೆ ಕೋವಿಡ್ ಪರೀಕ್ಷೆ ಮಾಡಬೇಕು.

-ವೈದ್ಯಾಧಿಕಾರಿಗಳು ಸೇರಿದಂತೆ ಬಿಬಿಎಂಪಿಯ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಸ್ಪರ ಉತ್ತಮ ಸಂವಹನ ಸಂಪರ್ಕ ಇಟ್ಟುಕೊಳ್ಳಬೇಕು.

-ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಮಾಲ್, ಮಾರುಕಟ್ಟೆ ಸೇರಿದಂತೆ ಎಲ್ಲೆಲ್ಲಿ ಜನಸಂದಣಿ ಹೆಚ್ಚಿರುತ್ತದೆಯೋ ಅಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು.

-ಕೋವಿಡ್ ಸೋಂಕಿತರು ಹಾಗೂ ನಾಗರಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು.

ನಾಗರಿಕರ ಕರ್ತವ್ಯ

-ಮನೆಯಿಂದ ಹೊರಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡಬೇಕು.

-ಕೋವಿಡ್ ಲಕ್ಷಣಗಳು ಕಂಡುಬಂದರೆ ಸ್ವಯಂಪ್ರೇರಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು.

-ಕೋವಿಡ್ ಸೋಂಕು ದೃಢಪಟ್ಟರೆ ವೈದ್ಯರು ಸೂಚಿಸುವ ಸಲಹೆ-ಸೂಚನೆಗಳನ್ನು ತಪ್ಪದೆ ಪಾಲಿಸಬೇಕು.

-ನಾಗರಿಕರು ತಮ್ಮ ವಾರ್ಡ್ ಗಳಲ್ಲಿ ಸ್ವಯಂಪ್ರೇರಿತವಾಗಿ ಕೋವಿಡ್ ನಿಯಮ ಪಾಲಿಸುವಂತೆ ನಿರ್ಣಯ ಕೈಗೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News