ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ: ಸಿಎಂ ಯಡಿಯೂರಪ್ಪ
ಬೆಳಗಾವಿ, ಮಾ.30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಕುರಿತು ಎಸ್‍ಐಟಿಯವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷದವರು ಇದರಲ್ಲಿ ದುರುದ್ದೇಶದ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿಡಿ ಪ್ರಕರಣದ ಕುರಿತು ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಪ್ರತಿದಿನ ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ಪಡೆಯುತ್ತಿದ್ದೇನೆ. ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯವಾದ ಆರೋಪ ಮಾಡಲಾಗಿದ್ದು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಆಗುತ್ತೆ ಅನ್ನೋದನ್ನು ಕಾದು ನೋಡೋಣ. ನಾವು ಎಲ್ಲ ಬಗೆಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ಈ ಸಿಡಿ ಪ್ರಕರಣ ಉಪ ಚುನಾವಣೆಯ ಮೇಲೆ ಯಾವುದೆ ಪರಿಣಾಮ ಬೀರಲ್ಲ. ಉಪ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಬರುವಂತೆ ರಮೇಶ್ ಜಾರಕಿಹೊಳಿಯನ್ನು ಆಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಆಕಸ್ಮಿಕವಾಗಿ ಈ ಉಪ ಚುನಾವಣೆ ಎದುರಾಗಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಈ ಚುನಾವಣೆಯನ್ನು ಎದುರಿಸಬೇಕಾಗಿದೆ. ಸುರೇಶ್ ಅಂಗಡಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವಂತೆ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರ ಬೇಡಿಕೆಯಾಗಿತ್ತು. ಆದುದರಿಂದ, ಸುರೇಶ್ ಅಂಗಡಿ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಅವರು ಹೇಳಿದರು.
ಸುರೇಶ್ ಅಂಗಡಿ ಮಾಡಿರುವ ಜನಪರ ಕಾರ್ಯಗಳು ಮತದಾರರ ಮನಸ್ಸಿನಲ್ಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಜೊತೆಯಲ್ಲಿ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.