ಅಶ್ಲೀಲ ಸಿಡಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ ಸಂತ್ರಸ್ತ ಯುವತಿ

Update: 2021-03-30 16:35 GMT

ಬೆಂಗಳೂರು, ಮಾ.30: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವ-ಇಚ್ಛೆಯ ಹೇಳಿಕೆ ದಾಖಲಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಸುಮಾರಿಗೆ ಇಲ್ಲಿನ ವಸಂತನಗರದ ಗುರುನಾನಕ್ ಭವನ ಬಳಿಯ ಎಸಿಎಂಎಂ ನ್ಯಾಯಾಧೀಶ ಬಾಲಗೋಪಾಲ್ ಅವರ ಮುಂದೆ ಸ್ವಯಂಪ್ರೇರಿತವಾಗಿ ಸಂತ್ರಸ್ತ ಯುವತಿ ಹಾಜರಾಗಿ, ಸಿಆರ್‍ಪಿಸಿ 164 ಅಡಿಯಲ್ಲಿ ಹೇಳಿಕೆ ನೀಡಿದರು.

ಭದ್ರತೆ ಕಾರಣಕ್ಕಾಗಿ ಮೊದಲೇ ಯೋಚಿಸಿ, ಮಾಹಿತಿಯನ್ನು ಗೌಪ್ಯವಾಗಿರಿಸಿ ಇಲ್ಲಿನ ನೃಪತುಂಗ ರಸ್ತೆಯ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬದಲು ವಸಂತನಗರದ ನ್ಯಾಯಾಲಯದಲ್ಲಿ ಹಾಜರಾಗುವಂತೆ ಯುವತಿಯನ್ನು ಸೂಚಿಸಲಾಗಿತ್ತು. ಜತೆಗೆ, ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಗುರುನಾನಕ್ ಭವನ ಬಳಿ ವಿಶೇಷ ನ್ಯಾಯಾಲಯ ಪ್ರಾರಂಭಿಸಲಾಗಿತ್ತು. ಅದರಂತೆ ಅಲ್ಲಿಯೇ ಯುವತಿಯ ಹೇಳಿಕೆ ಪಡೆಯಲಾಯಿತು.

ಕಾರಿನಲ್ಲಿಯೇ ತೆರಳಿದರು: ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಿದ ನ್ಯಾಯಾಧೀಶರು, ಸ್ವತಃ ಕಾರಿನಲ್ಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ವಸಂತನಗರದ ನ್ಯಾಯಾಲಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬೆರಳಚ್ಚುಗಾರರೊಬ್ಬರು ಜತೆಗಿದ್ದರು.

ಸಿಟ್ ವಿಚಾರಣೆ: ಪ್ರಕರಣವೊಂದರ ಸಂಬಂಧ ಹೇಳಿಕೆ ಪಡೆಯಲು ನ್ಯಾಯಾಲಯದ ಅನುಮತಿ ಪಡೆದ ಸಿಟ್(ವಿಶೇಷ ತನಿಖಾ ದಳ) ಅಧಿಕಾರಿಗಳು, ಆಕೆಯನ್ನು ಇಲ್ಲಿನ ಆಡುಗೋಡಿ ತಾಂತ್ರಿಕ ವಿಭಾಗಕ್ಕೆ ಕರೆತಂದು ಸೆಕ್ಷನ್ 161 ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲು ಮಾಡಿಕೊಂಡರು.

ವೈದ್ಯಕೀಯ ಪರೀಕ್ಷೆ: ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಗಂಭೀರ ರೀತಿಯ ಆರೋಪಗಳ ಹಿನ್ನೆಲೆ ಬುಧವಾರ(ಮಾ.31) ತನಿಖಾಧಿಕಾರಿಗಳು ಸಂತ್ರಸ್ತ ಯುವತಿಯನ್ನು ಇಲ್ಲಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಳೆ ಮತ್ತೆ ವಿಚಾರಣೆ: ನೋಟಿಸ್

ಮಂಗಳವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯಿಂದ ಸಿಆರ್‍ಪಿಸಿ ಸೆಕ್ಷನ್ 161ರಡಿ ಧ್ವನಿ ಮಾದರಿ ಸಂಗ್ರಹಿಸಿದ ಸಿಟ್ ತನಿಖಾಧಿಕಾರಿಗಳು, ಬುಧವಾರ(ಮಾ.31) ಪುನಃ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಸೂಚಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News