ಯುವತಿಯನ್ನು ಹಾಜರುಪಡಿಸಿದ್ದೇವೆ, ಆರೋಪಿಯನ್ನು ಯಾವಾಗ ಬಂಧಿಸುತ್ತೀರಿ?: ವಕೀಲ ಜಗದೀಶ್ ಪ್ರಶ್ನೆ
ಬೆಂಗಳೂರು, ಮಾ.30: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಬೇಕು ಎಂದು ಯುವತಿ ಪರ ವಕೀಲ ಜಗದೀಶ್ ಕೆ.ಎನ್.ಮಹಾದೇವ್ ಒತ್ತಾಯ ಮಾಡಿದರು.
ಮಂಗಳವಾರ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಹೇಳಿದ ಮಾತುಗಳಂತೆ ಇಂದು ಯುವತಿಯನ್ನು ಹಾಜರುಪಡಿಸಿದ್ದೇವೆ. ಜತೆಗೆ ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಆದರೆ, ಆರೋಪಿಯನ್ನು ಪೊಲೀಸರು ಮತ್ತು ಸರಕಾರ ಏಕೆ ಬಂಧಿಸುತ್ತಿಲ್ಲ. ಅವರನ್ನು ಯಾವಾಗ ಬಂಧಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.
ತನಿಖಾಧಿಕಾರಿ ನ್ಯಾಯಾಧೀಶರ ಸಮ್ಮುಖದಲ್ಲಿ ಸೆಕ್ಷನ್ 161 ಅಡಿ ಸಂತ್ರಸ್ತೆಯ ಹೇಳಿಕೆ ಪಡೆಯುವುದಕ್ಕೆ ಮನವಿ ಮಾಡಿದರು. ಅದರಂತೆ, ನಾವು ಯುವತಿಯ ಪರ ವಕೀಲರು ಒಪ್ಪಿಗೆ ಸೂಚಿಸಿದೆವು. ಹೀಗಾಗಿಯೇ, ನಾವೇ ಸ್ವತಃ ಆಕೆಯನ್ನು ಆಡುಗೋಡಿಯ ತಾಂತ್ರಿಕ ವಿಭಾಗಕ್ಕೆ ಕರೆದುಕೊಂಡು ಬಂದಿದ್ದೇವೆ ಎಂದರು.
ಸಿಟ್ ಆಕೆಯ ಹೇಳಿಕೆ ಪಡೆದ ನಂತರ, ನಾವೇ ಆಕೆಯನ್ನು ಕರೆದುಕೊಂಡು ಹೋಗುತ್ತೇವೆ ಎಂದ ಅವರು, ರಾಜ್ಯ ಸರಕಾರ ಈ ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಪೋಷಕರು ಅಪಹರಣ ದೂರು ನೀಡಿರುವ ಕುರಿತು ಉತ್ತರಿಸಿದ ಅವರು, ಆಕೆ ಅಪ್ರಾಪ್ತ ಬಾಲಕಿ ಅಲ್ಲ. ಆಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯ ಹೊಂದಿದ್ದು, ಅಪಹರಣ ವಿಚಾರ ಬರುವುದಿಲ್ಲ ಎಂದು ವಿವರಿಸಿದರು.
ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ದೂರು ನೀಡಿಲ್ಲ. ಯುವತಿ ಒತ್ತಡಕ್ಕೆ ಒಳಗಾಗಿದ್ದಾಳೆ ಎಂಬ ಸುದ್ದಿಗಳಿಗೆ ತೆರೆ ಎಳೆದಿದ್ದೇವೆ. ಇದೀಗ ಸರಕಾರ, ಆರೋಪಿಯನ್ನು ಬಂಧಿಸುವತ್ತ ಗಮನ ಹರಿಸಬೇಕು.
-ಜಗದೀಶ್ ಕೆ.ಎನ್.ಮಹಾದೇವ್, ವಕೀಲ