ವೈಯುಕ್ತಿಕ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ: 'ಸರ್ವಾಧಿಕಾರ' ಹೇಳಿಕೆ ಬಗ್ಗೆ ಸಚಿವ ಮಾಧುಸ್ವಾಮಿ ಸ್ಪಷ್ಟನೆ
ತುಮಕೂರು, ಮಾ.30: ರಾಜ್ಯದ ಸಣ್ಣ ನೀರಾವರಿ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿಂದು ಸ್ಪಷ್ಟನೆ ನೀಡಿದ್ದಾರೆ.
'ನಾನು ಬಿಜೆಪಿ ಸರಕಾರದ ಮಂತ್ರಿಯಾಗಿ, ನಮ್ಮ ಸರಕಾರದ ವಿರುದ್ಧ ಟೀಕೆ ಮಾಡಲು ಸಾಧ್ಯವಿಲ್ಲ. ವಿಚಾರ ಸಂಕಿರಣವೊಂದರಲ್ಲಿ ವ್ಯಕ್ತಪಡಿಸಿದ ವೈಯುಕ್ತಿಕ ಅಭಿಪ್ರಾಯವನ್ನೇ ತಪ್ಪಾಗಿ ಅರ್ಥೈಸಿ, ಹಾಲಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ ಎಂಬಂತೆ ಸುದ್ದಿ ಪ್ರಕಟವಾಗಿದೆ. ಇದನ್ನೇ ನಂಬಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನನಗೆ ಆರೂವರೆ ಕೋಟಿ ಕನ್ನಡಿಗರ ಪರವಾಗಿ ಮಾತನಾಡಿದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದು ಅವರ ತಪ್ಪು ಕಲ್ಪನೆ ಎಂದು ಹೇಳಿದರು.
ನಾನು ಕಳೆದ 70 ವರ್ಷಗಳಲ್ಲಿ ಭಾರತದ ಪರಿಕಲ್ಪನೆ ಪ್ರಾದೇಶಿಕತೆ ಹೆಸರಿನಲ್ಲಿ ಎಲ್ಲಿಗೆ ತಲುಪಿದೆ ಎಂಬುದನ್ನು ವಿವರಿಸಿದ್ದೇನೆ. ಸ್ವಾತಂತ್ರ ಬಂದಾಗ ಇದ್ದ 16 ರಾಜ್ಯಗಳು ಹೋಗಿ, ಇಂದು 30 ರಾಜ್ಯಗಳಾಗಿವೆ. ಪ್ರಾದೇಶಿಕತೆಯ ಹೆಸರಿನಲ್ಲಿ ರಾಜ್ಯಗಳನ್ನೇ ವಿಕೇಂದ್ರೀಕರಿಸುವ ಕೆಲಸ ಆಗಿದೆ. ಇವುಗಳ ನಡುವೆ ಸಮನ್ವಯ ತರುವ ಕೆಲಸ ಆಗಬೇಕಾಗಿತ್ತು. ಆದು ಸಾಧ್ಯವಾಗಿಲ್ಲ ಎಂದಿರುವುದು ನಿಜ ಎಂದರು.
ಕೇಂದ್ರ ಸರಕಾರ ಶ್ರೀಲಂಕಾದೊಂದಿಗೆ ಸ್ನೇಹದಿಂದ ಇದ್ದರೆ ತಮಿಳುನಾಡಿಗೆ ಕೋಪ, ಬಂಗಾಳದೊಂದಿಗೆ ಸ್ನೇಹ ಬೆಳೆಸಿದರೆ ಪಶ್ಚಿಮ ಬಂಗಾಳಕ್ಕೆ ಕೋಪ. ಹೀಗೆ ಅವರವರ ಉದ್ದಾರದಲ್ಲಿ ಸುತ್ತಮುತ್ತಲ ದೇಶಗಳ ದ್ವೇಷ ಕಟ್ಟಿಕೊಳ್ಳಬೇಕಾಗಿದೆ ಎಂಬ ಮಾತುಗಳನ್ನು ಆಡಿದ್ದು, ಇದನ್ನೇ ಮೋದಿ ಸರಕಾರದ ವಿರುದ್ಧ ಮಾಧುಸ್ವಾಮಿ ಗುಡುಗಿದರು ಎಂಬಂತೆ ಬಿಂಬಿಸಲಾಗಿದೆ. ಇದು ತಪ್ಪು ಎಂದು ಸ್ಪಷ್ಟನೆ ನೀಡಿದರು.