‘ಬಹಿರಂಗ ಚರ್ಚೆಗೆ ನಾನು ಸಿದ್ಧ’: ಕುಮಾರಸ್ವಾಮಿಗೆ ಝಮೀರ್ ಅಹ್ಮದ್ ಸವಾಲು

Update: 2021-03-31 14:45 GMT

ಬೆಂಗಳೂರು, ಮಾ.31: 2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಎಚ್.ಡಿ.ಕುಮಾರಸ್ವಾಮಿ, ಅಡ್ಜಸ್ಟ್ ಮೆಂಟ್ ರಾಜಕೀಯದ ಮೂಲಕ ಇವತ್ತು ತುಂಬಿದ ಕೊಡವಾಗಿದ್ದಾರೆ. ಹಾಗಾಗಿ ದುಡ್ಡಿನ ವಿಚಾರ ಮಾತಾಡ್ತಾರೆ. ಹಿಂದೆ ಯಾರು ಯಾರಿಗೆ ಎಷ್ಟು ಸಹಾಯ ಮಾಡಿದ್ದಾರೆ? ಎಂದು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ನೀವು ಸಿದ್ಧರಿದ್ದೀರಾ ಬ್ರದರ್ ? ಎಂದು ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಚಾಮರಾಜಪೇಟೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಿ, ಗಲ್ಲಿ ಗಲ್ಲಿ ಸುತ್ತಿ ಪ್ರಚಾರ ಮಾಡಿ ನನ್ನನ್ನು ಗೆಲ್ಲಿಸಿದವರು ದೇವೇಗೌಡರು ಮತ್ತು ಸಿದ್ದರಾಮಯ್ಯನವರು. ಆಗ ಕುಮಾರಸ್ವಾಮಿ ಅಂದರೆ ಯಾರು ಅಂತಲೇ ಜನಕ್ಕೆ ಗೊತ್ತಿರಲಿಲ್ಲ. ನನ್ನ ಕ್ಷೇತ್ರದಲ್ಲಿ ಎಷ್ಟು ವಾರ್ಡ್ ಗಳಿವೆ ಎಂದು ಈಗಲಾದರೂ ನಿಮಗೆ ಗೊತ್ತಾ ಎಚ್.ಡಿ.ಕುಮಾರಸ್ವಾಮಿ ಬ್ರದರ್? ಎಂದು ಟೀಕಿಸಿದ್ದಾರೆ.

ಝಮೀರ್ ಎಂದೂ ಕೊಟ್ಟ ಹಣಕ್ಕೆ ಲೆಕ್ಕ ಇಟ್ಟವನಲ್ಲ. ಆದರೆ ಪಡ್ಕೊಂಡವರು ಮರೆಯಬಾರದಲ್ವಾ ಬ್ರದರ್. 2004ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದ ಜೆಡಿ(ಎಸ್) ಅಭ್ಯರ್ಥಿ ಯಾರಿಂದ ಎಷ್ಟು ಪಡ್ಕೊಂಡಿದ್ದರು ಎನ್ನುವುದನ್ನು ಒಳ್ಳೆಯ ಮೂಡಿನಲ್ಲಿದ್ದಾಗ ನೆನಪು ಮಾಡಿಕೊಳ್ಳಿ ಬ್ರದರ್ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ನನ್ನನ್ನು ಗೆಲ್ಲಿಸಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಜಾತ್ಯತೀತ ನಾಯಕರೇ, ಝಮೀರ್ ಅಹ್ಮದ್ ಜೆಡಿ(ಎಸ್) ಪಕ್ಷದಿಂದ ಹೊರಬಂದ ಮೇಲೆ ಎಷ್ಟು ಮುಸ್ಲಿಮ್ ನಾಯಕರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೀರಿ? ಇಷ್ಟು ಹೇಳಿಬಿಡಿ ಸಾಕು ಎಂದು ಅವರು ಪ್ರಶ್ನಿಸಿದ್ದಾರೆ.

ತಮಗೆ ಮುಸ್ಲಿಮ್ ಸಮುದಾಯದ ಮೇಲೆ ನಿಜವಾಗಿ ಪ್ರೀತಿ ಇದ್ದಿದ್ದರೆ ರಾಮನಗರದಲ್ಲೋ, ಮಂಡ್ಯದಲ್ಲೋ, ಹಾಸನದಲ್ಲೋ ಒಬ್ಬನೇ ಒಬ್ಬ ಮುಸ್ಲಿಮ್ ನಾಯಕನಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಬ್ರದರ್? ಎಂದು ಝಮೀರ್ ಅಹ್ಮದ್ ಖಾನ್ ಕೇಳಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೊರೋನ ಸೋಂಕಿಗೆ ತುತ್ತಾದ ಸುದ್ದಿ ಕೇಳಿ ಬೇಸರವಾಯಿತು. ದೂರವಾಣಿ ಕರೆಮಾಡಿ ಅವರ ಆರೋಗ್ಯ ವಿಚಾರಿಸಿದ್ದೇನೆ. ಆದಷ್ಟು ಬೇಗ ಅವರು ಕೊರೋನ ಸೋಂಕಿನಿಂದ ಗುಣಮುಖರಾಗಿ ಜನಸೇವೆಯಲ್ಲಿ ತೊಡಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

-ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News