ಪಂಚರಾಜ್ಯ ಚುನಾವಣೆಯಲ್ಲಿ ಮೋದಿ ಕೃಷಿ ಕಾಯ್ದೆಗಳ ಬಗ್ಗೆ ಏಕೆ ತುಟಿಬಿಚ್ಚುತ್ತಿಲ್ಲ: ಯುದ್ಧವೀರ್ ಸಿಂಗ್ ಪ್ರಶ್ನೆ

Update: 2021-03-31 14:50 GMT

ಬೆಂಗಳೂರು/ಬೆಳಗಾವಿ, ಮಾ. 31: ‘ಕೇಂದ್ರ ತಿದ್ದುಪಡಿ ಮಾಡಿರುವ ಮೂರು ಕೃಷಿ ಕಾಯ್ದೆಗಳು ರೈತರ ಪರವಾಗಿದ್ದರೆ ಪ್ರಧಾನಿ ಮೋದಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸಹಿತ ಪಂಚರಾಜ್ಯಗಳ ಚುನಾವಣೆಯಲ್ಲಿ ಏಕೆ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ' ಎಂದು ಅಖಿಲ ಭಾರತ ಕಿಸಾನ್ ಮೋರ್ಚಾ ಮುಖಂಡ ಯುದ್ಧವೀರ್ ಸಿಂಗ್ ಪ್ರಶ್ನಿಸಿದ್ದಾರೆ.

ಬುಧವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ರೈತ ಮಹಾಪಂಚಾಯತ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ರೈಲು, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇಶವೇ ಮಾರಾಟ: ದಿಲ್ಲಿಯಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ವಿರೋಧಿಸಿ ಹೋರಾಟ ಮುಂದುವರಿದಿದೆ. ರೈತರ ಕೃಷಿ ಭೂಮಿಯನ್ನ ಕಸಿದುಕೊಳ್ಳುವ ಕಾಯ್ದೆಗಳ ವಿರುದ್ಧ ನಮ್ಮ ಚಳವಳಿ ನಿಲ್ಲದು. ದೇಶವನ್ನು ಅದಾನಿ, ಅಂಬಾನಿಗೆ ಮಾರಾಟ ಮಾಡಲಾಗುತ್ತಿದೆ. ಇದು ಬಿಜೆಪಿ ಸರಕಾರವಲ್ಲ, ಬದಲಿಗೆ ಇದು ಮೋದಿ ಸರಕಾರ. ಹೀಗಾಗಿ ಮೋದಿ ದೇಶವನ್ನೇ ಮಾರಾಟ ಮಾಡುತ್ತಿದ್ದಾರೆ ಎಂದು ಯುದ್ಧವೀರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಇಂದು ಜಾತಿ-ಧರ್ಮವನ್ನ ಬಿಟ್ಟು ತಮ್ಮ ಅಸ್ತಿತ್ವದ ಉಳಿವಿಗಾಗಿ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ಬಿಜೆಪಿಯವರು ಹಿಂದೂ-ಮುಸ್ಲಿಮರ ಪರ ಅಲ್ಲವೇ ಅಲ್ಲ. ದೇಶದ ಜನತೆಗೆ ರಾಮ ಮಂದಿರದಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದ ಅವರು, ರೈತನ ರಾಮ ಅವರ ಕೆಲಸದಲ್ಲಿ, ರೈತನ ಭೂಮಿಯಲ್ಲಿ ಹಾಗೂ ಶ್ರಮಜೀವಿಗಳ ಕಾಯಕದಲ್ಲಿ ಇದ್ದಾನೆ ಎಂದು ಯುದ್ಧವೀರ್ ಸಿಂಗ್ ವಿಶ್ಲೇಷಿಸಿದರು.

ಬಿಜೆಪಿಯವರು ದೊಡ್ಡ ಬಂಡವಾಳಶಾಹಿಗಳ ಪರವಾಗಿದ್ದು, ಅವರೆಲ್ಲರೂ ದೇಶದ ಲೂಟಿಕೋರರು. ಇಲ್ಲಿನ ಸಮಾವೇಶದಲ್ಲಿ ನೆರೆದಿರುವ ಎಲ್ಲ ರೈತರು ದಿಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆಯುವ ಚಳವಳಿಯಲ್ಲಿ ಇಲ್ಲಿನ ರೈತರು ಪಾಲ್ಗೊಳ್ಳಬಹುದು. ಆ ಮೂಲಕ ದಿಲ್ಲಿ ರೈತರ ಹೋರಾಟಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಅವರು ಮನವಿ ಮಾಡಿದರು.

ಸರ್ವಾಧಿಕಾರಿ: ದೇಶದಲ್ಲಿ ಹಿಟ್ಲರ್, ಮುಸಲೋನಿಯರಂತೆ ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕ ಸರ್ವಾಧಿಕಾರಿ ಆಡಳಿತದಲ್ಲಿದ್ದು, ಆತನನ್ನು ಡಿಜಿಟಲ್ ಮೂಲಕವೇ ಪಕ್ಕಕ್ಕೆ ಸರಿಸಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ್ ಇಂದಿಲ್ಲಿ ಸಲಹೆ ಮಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ರೂಪಿಸಿಕೊಟ್ಟ ಸಂವಿಧಾನ ನಮ್ಮೆಲ್ಲರ ಆತ್ಮ. ಸಂವಿಧಾನವೇ ಈ ದೇಶದ ಜನರ ಆತ್ಮವೂ ಕೂಡ. ಸಂವಿಧಾನಕ್ಕೆ ನೀವು ಬೆಲೆ ಕೊಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನ ಬಳಿ ಅಧಿಕಾರವಿದೆ ಎಂದು ಬುಲ್ಡೋಜರ್ ತೆಗೆದುಕೊಂಡು ಯಾರ ಮೇಲೆ ಬೇಕಾದರೂ ಹಾಯಿಸಿಕೊಂಡು ಹೋಗುತ್ತೀರಿ ಎಂದರೆ ಅದು ನಿಮ್ಮ ಭ್ರಮೆ ಎಂದು ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾವೇಶ ಆರಂಭಕ್ಕೆ ಮೊದಲು ರಾಣಿ ಚೆನ್ನಮ್ಮ ವೃತ್ತದಿಂದ ಮೈದಾನದ ವರೆಗೆ ಎತ್ತಿನಗಾಡಿ ಮೆರವಣಿಗೆ ನಡೆಸಲಾಯಿತು. ರೈತ ಪಂಚಾಯತ್ ಸಮಾವೇಶದಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್, ರೈತ ನಾಯಕ ಚುಕ್ಕಿ ನಂಜುಂಡಸ್ವಾಮಿ, ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣಿಕರ, ಮಾಜಿ ಶಾಸಕ ಬಿ.ಆರ್.ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈತ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News