ಮುಝಫ್ಫರ್ ನಗರ ಗಲಭೆ: ಬಿಜೆಪಿ ನಾಯಕರ ವಿರುದ್ಧದ ಪ್ರಕರಣ ಹಿಂದೆತೆಗ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಸ್‍ಡಿಪಿಐ ನಿರ್ಧಾರ

Update: 2021-03-31 17:50 GMT

ಹೊಸದಿಲ್ಲಿ, ಮಾ.31: 2013ರ ಮುಝಫ್ಫರ್ ನಗರ ಗಲಭೆಗೆ ಸಂಬಂಧಿಸಿ ಬಿಜೆಪಿಯ ಸಂಸದರು, ಶಾಸಕರು ಸೇರಿದಂತೆ 51 ಆರೋಪಿಗಳ ವಿರುದ್ಧದ 75 ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ.

ಮುಝಫ್ಫರ್ ನಗರ ಗಲಭೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದುಕೊಳ್ಳುವುದು ನ್ಯಾಯವನ್ನು ಸ್ಪಷ್ಟವಾಗಿ ನಿರಾಕರಿಸುವ ಹಾಗೂ ಗಲಭೆಕೋರರು, ಸಂಚುಕೋರರು ಮತ್ತು ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನವಾಗಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಟೀಕಿಸಿದ್ದಾರೆ.

ಮುಝಫ್ಫರ್ ನಗರದಲ್ಲಿ ಜನರನ್ನು ಲೂಟಿ ಮಾಡಿದ, ಬೆಂಕಿ ಹಚ್ಚಿದ ಮತ್ತು ಹತ್ಯೆಗೈದ ದಂಗೆಕೋರರನ್ನು ಪ್ರಚೋದಿಸುವಲ್ಲಿ ಮುಖ್ಯ ಅರೋಪಿಗಳಾಗಿರುವ ಶಾಸಕರು, ಸಂಸದರು ಮತ್ತು ಬಿಜೆಪಿಯ ನಾಯಕರನ್ನು ರಕ್ಷಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಬಹಳ ಉತ್ಸುಕವಾಗಿದೆ ಎಂದು ಅವರು ಕಿಡಿಗಾರಿದ್ದಾರೆ.

ಮುಝಫ್ಫರ್ ನಗರ ಗಲಭೆ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಬದಲು, ಈ ರೀತಿಯ ಕುತಂತ್ರಗಳ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕಲು ಯು.ಪಿ ಸರಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

2013 ರಲ್ಲಿ ಮುಝಫ್ಫರ್ ನಗರ ಗಲಭೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಕೋಮು ದಾಳಿಯ ಭಯೋತ್ಪಾದಕ ಅಧ್ಯಾಯಗಳಲ್ಲಿ ಒಂದಾಗಿದ್ದು, ಈ ಗಲಭೆಯಲ್ಲಿ 65 ಜನರು ಸಾವನ್ನಪ್ಪಿ, 92 ಮಂದಿ ಗಾಯಗೊಂಡಿದ್ದರು. ಮಾತ್ರವಲ್ಲ 50,000ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು. ಈ ಗಲಭೆ ದೇಶದೊಳಗೆ ಮತ್ತು ಹೊರಗೆ ವ್ಯಾಪಕ ಆಕ್ರೋಶ ಮತ್ತು ಖಂಡನೆಗೆ ಕಾರಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಉತ್ತರಪ್ರದೇಶ ಸಚಿವ ಮತ್ತು ಥಾನಾ ಭವನ ಕ್ಷೇತ್ರದ ಶಾಸಕ ಸುರೇಶ್ ರಾಣಾ, ಸರ್ಧಾನ ಬಿಜೆಪಿ ಶಾಸಕ ಸಂಗೀತ್ ಸೋಮ್, ಬಿಜೆಪಿ ಸಂಸದ ಭಾತೆರ್ಂದು ಸಿಂಗ್, ಮುಝಫ್ಫರ್ ನಗರ ಕ್ಷೇತ್ರದ ಶಾಸಕ ಕಪಿಲ್ ದೇವ್ ಮತ್ತು ವಿಎಚ್‍ಪಿ ನಾಯಕಿ ಸಾಧ್ವಿ ಪ್ರಾಚಿ ಮುಂತಾದವರು, ನಂಗ್ಲಾ ಮಂದೌರ್ ಮಹಾ ಪಂಚಾಯತ್ ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು ಮತ್ತು ದ್ವೇಷ ಭಾಷಣಗಳು ಮತ್ತು ಮುಝಫ್ಫರ್ ನಗರದಲ್ಲಿ ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳಲು ಜನರಿಗೆ ಕರೆ ನೀಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಮುಹಮ್ಮದ್ ಶಾಫಿ ದೂರಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 188(ಮಾರಕಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತವಾಗಿ ಕಾನೂನುಬಾಹಿರವಾಗಿ ಒಟ್ಟು ಸೇರುವುದು), 353(ಸಾರ್ವಜನಿಕ ಸೇವಕರನ್ನು ಹಿಮ್ಮೆಟ್ಟಿಸಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 153 ಎ(ಧರ್ಮದ ಆಧಾರದಲ್ಲಿ ದ್ವೇಷ ಉತ್ತೇಜಿಸುವುದು ಮತ್ತು ಸಾಮರಸ್ಯ ಕದಡಲು ಪೂರ್ವಗ್ರಹ ಪೀಡಿತ ಕೃತ್ಯ), 341(ಅಕ್ರಮ ತಡೆ ನೀಡುವುದು), 435(ಹಾನಿಯನ್ನುಂಟುಮಾಡುವ ಉದ್ದೇಶದಿಂದ ಸ್ಫೋಟಕ ವಸ್ತು ಮತ್ತು ಬೆಂಕಿ ಹಚ್ಚುವಿಕೆ) ಮುಂತಾದ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮುಝಫ್ಫರ್ ನಗರ ಗಲಭೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರಕಾರ 510 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ 175 ದೋಷಾರೋಪ ಪಟ್ಟಿ ಸಲ್ಲಿಸುವ ಮೂಲಕ ಕೋಮು ಗೂಂಡಾಗಳು ಮತ್ತು ಅಪರಾಧಿಗಳ ಪರವಾಗಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. 51 ಆರೋಪಿಗಳ ವಿರುದ್ಧದ 75 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಸ್‍ಡಿಪಿಐ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಹಮ್ಮದ್ ಶಾಫಿ ಪ್ರಕಟಣೆಯಲ್ಲಿ ಪುನರುಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News