ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೇಲಿನ ಆರೋಪ ಸತ್ಯಕ್ಕೆ ದೂರ: ದಯಾನಂದ್ ಕತ್ತಲ್ ಸಾರ್
ಬೆಂಗಳೂರು, ಮಾ.31: ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದ್ದೆಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ್‍ಕತ್ತಲ್ ಸಾರ್ ತಿಳಿಸಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಗುರುವಾಯನಕೆರೆಯ ಸೋಮನಾಥ ನಾಯಕ್ ಎಂಬ ವ್ಯಕ್ತಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಧರ್ಮಸ್ಥಳದ ಜಮೀನಿನ ಕುರಿತು ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಸುಳ್ಳು ಆರೋಪ ಮಾಡುವವರಿಗೆ ಸತ್ಯಾಂಶ ತಿಳಿಸಿಕೊಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಧರ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜಮೀನುಗಳ ಪಹಣಿ ಪತ್ರಿಕೆಗಳನ್ನು ಪರಿಶೀಲಿಸಿದಾಗ 1970ರ ದಶಕದಿಂದ 2021ರವರೆಗೆ ದಸ್ತಾವೇಜ್‍ನಲ್ಲಿ ದಾಖಲಾಗಿರುವ 51 ವರ್ಷದ ಪಹಣಿ ಪತ್ರಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಎಲ್ಲಿಯೂ ದೇವರ ಹೆಸರಿನ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ಬರೆಸಿಕೊಂಡಿರುವುದು ಕಂಡು ಬಂದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಳ್ತಂಗಡಿ ಭೂ-ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನು ಪಡೆದುಕೊಂಡು ಅವಲೋಕಿಸಿದಾಗ ಅದರಲ್ಲಿಯೂ ದೇವರ ಹೆಸರಿನಲ್ಲಿರುವ ಆಸ್ತಿಯನ್ನು ವೀರೇಂದ್ರ ಹೆಗ್ಗಡೆ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವಂತಹ ಯಾವುದೇ ಕೃತ್ಯದ ಉಲ್ಲೇಖ ಇರುವುದಿಲ್ಲ. ಎಲ್ಲವೂ ಪಾರದರ್ಶಕವಾಗಿದ್ದು ಸದರೀ ಸರಕಾರದ ದಸ್ತಾವೇಜಿನ ದಾಖಲೆಯಲ್ಲಿ ಮಿತಿಗಿಂತ ಜಾಸ್ತಿ ಜಮೀನು ವಿರೇಂದ್ರ ಹೆಗ್ಗಡೆಯವರಲ್ಲಿ ಇಲ್ಲ ಎನ್ನುವ ಆದೇಶ ಮಾತ್ರವಿದೆ ಎಂದು ಅವರು ಹೇಳಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮೇಲೆ ಅನಗತ್ಯ ಆರೋಪ ಮಾಡುತ್ತಿರುವವರ ದುರುದ್ದೇಶ ಬೇರೆಯದೇ ಇದೆ. ಮುಂದಿನ ದಿನಗಳಲ್ಲಿ ಧರ್ಮಾಧಿಕಾರಿಗಳ ವಿರುದ್ಧ ಇಂತಹ ಆಧಾರರಹಿತ ಆರೋಪ ಯಾರು ಮಾಡಬಾರದೆಂದು ಅವರು ತಿಳಿಸಿದ್ದಾರೆ.
ಈ ವೇಳೆ ಕನಕ ಸದ್ಭಾವನ ಜ್ಯೋತಿರಥ ಯಾತ್ರೆ ಸಮಿತಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ತುಳು ಕರವೇ ನಗರಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಹೋರಾಟಗಾರ ಎನ್.ವಿ.ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.