ಎಲ್ಲ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಕೋವಿಡ್ ಬ್ಲಾಕ್ ತೆರೆಯಬೇಕು: ಮಂಜುನಾಥ ಪ್ರಸಾದ್
ಬೆಂಗಳೂರು, ಮಾ.31: ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಕೋವಿಡ್ ಬ್ಲಾಕ್‍ಗಳಿರಬೇಕು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಪ್ರತ್ಯೇಕವಾಗಿರಬೇಕು. ಕೋವಿಡ್ ಹಾಗೂ ಅನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಒಂದೇ ಸಿಬ್ಬಂದಿಯನ್ನು ನಿಯೋಜನೆ ಮಾಡಿರಬಾರದೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಸೂಚಿಸಿದ್ದಾರೆ.
ಬುಧವಾರ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳ ಜೊತೆ ಜೂಮ್ ಮುಖಾಂತರ ವರ್ಚುವಲ್ ಸಭೆ ನಡೆಸಿದ ಅವರು, ನಗರದಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾಗುತ್ತಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಮುಂದಿನ 7 ದಿನಗಳ ಕಾಲ ಕೋವಿಡ್ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಶೇ.10 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಈ ಸಂಬಂಧ ತಮ್ಮ ತಮ್ಮ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮಾತನಾಡಬೇಕೆಂದು ತಿಳಿಸಿದ್ದಾರೆ.
ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟವರು ಬಹುತೇಕ ಹೋಮ್ ಐಸೋಲೇಷನ್‍ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಸಿಮ್ಟಾಮ್ಯಾಟಿಕ್ ಇರುವವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವಂತೆ ಅವರು ತಿಳಿಸಿದ್ದಾರೆ.
ಸೋಂಕು ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಬಂದರೆ ಅವರಿಗೆ ಆಕ್ಸಿಜನ್ ವ್ಯವಸ್ಥೆಯಿಲ್ಲವೆಂದು ದಾಖಲು ಮಾಡಿಕೊಳ್ಳದೆ ಬೇರೆ ಆಸ್ಪತ್ರೆಗೆ ತೆರಳಲು ಸೂಚಿಸಕೂಡದು. ಆಸ್ಪತ್ರೆಗೆ ಬಂದಂತಹ ಸೋಂಕಿತ ವ್ಯಕ್ತಿಯನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು. ಎಲ್ಲಾ ಆಸ್ಪತ್ರೆಗಳ ಮುಂಭಾಗ ಕೋವಿಡ್ ಚಿಕಿತ್ಸೆಗಾಗಿ ಎಷ್ಟು ಹಾಸಿಗೆಗಳಿವೆ, ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಯಾವ ಹಾಸಿಗೆ ಖಾಲಿಯಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಿದಾಗ ಆಸ್ಪತ್ರೆಗೆ ದಾಖಲಾಗಲು ಬಂದಂತಹ ವ್ಯಕ್ತಿಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
45 ವರ್ಷ ಮೇಲ್ಪಟ್ಟವರಿಗೆ ಲಸಿಕೆ
ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ 525 ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ದಿನಕ್ಕೆ 85,000ಕ್ಕೂ ಲಸಿಕೆ ನೀಡಬಹುದಾಗಿದೆ. ನಾಳೆ(ಎ.1)ಯಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಜಾರಿಯಾಗಲಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸೆಷನ್‍ಗಳನ್ನು ಮಾಡಿಕೊಂಡು ಅವಶ್ಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ವ್ಯವಸ್ಥಿತವಾಗಿ ಲಸಿಕೆ ನೀಡಲು ಕ್ರಮವಹಿಸಬೇಕೆಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಲಸಿಕೆಗೆ ಯಾವುದೇ ಕೊರತೆಯಿಲ್ಲ. ಅವಶ್ಯಕ ಲಸಿಕೆ ಲಭ್ಯವಿದ್ದು, ಸದ್ಯ 1.50 ಲಕ್ಷ ಲಸಿಕೆ ಸಂಗ್ರಹವಿದ್ದು, ನಾಳೆ 4 ಲಕ್ಷ ಲಸಿಕೆ ಬರಲಿದೆ. ಹೆಚ್ಚು ಸೆಷನ್‍ಗಳನ್ನು ಮಾಡುವ ಆಸ್ಪತ್ರೆಗಳಿಗೆ ಅವಶ್ಯಕ ಲಿಸಿಕೆಗಳನ್ನು ನೀಡಲಾಗುವುದು. ನಗರದಲ್ಲಿ ಇದುವರೆಗೆ 7 ಲಕ್ಷ ಲಸಿಕೆ ನೀಡಲಾಗಿದ್ದು, ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಈ ಸಂಬಂಧ ಯಾರೂ ಭಯಪಡುವ ಅಗತ್ಯವಿಲ್ಲವೆಂದು ನಾಗರಿಕರಲ್ಲಿ ಅರಿವು ಮೂಡಿಸಬೇಕು. ಜನಗಣತಿ ಪ್ರಕಾರ 60 ವರ್ಷಕ್ಕೆ ಮೇಲ್ಪಟ್ಟವರು 10 ಲಕ್ಷ ಮಂದಿಯಿದ್ದು, 45 ವರ್ಷಕ್ಕೆ ಮೇಲ್ಪಟ್ಟವರು ಸುಮಾರು 25 ಲಕ್ಷ ಮಂದಿಯಿದ್ದಾರೆ. ಇಷ್ಟು ಮಂದಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.