ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
Update: 2021-04-01 14:20 IST
ಆನೇಕಲ್, ಎ.1: ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಿನ್ನೆ ರಾತ್ರಿ ತಡವಾಗಿ ಬೆಳಕಿಗೆ ಬಂದಿದೆ.
ಬಳ್ಳಾರಿ ಮೂಲದ ಶಿವು (12) ಹಾಗೂ ಮಾದನಾಯಕನಹಳ್ಳಿ ಗ್ರಾಮದ ಕಾರ್ತಿಕ್(12) ಮೃತಪಟ್ಟ ಬಾಲಕರು. ಇವರಿಬ್ಬರು ಏಳನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು.
ಬಿಸಿಲಿನ ಝಳದ ಕಾರಣ ಶಿವು ಹಾಗೂ ಕಾರ್ತಿಕ್ ಸ್ನಾನ ಮಾಡಲೆಂದು ಬುಧವಾರ ಸಂಜೆ ಆನೇಕಲ್ ತಾಲೂಕಿನ ಮುಗಳೂರು ಕೆರೆಗೆ ಇಳಿದಿದ್ದರೆನ್ನಲಾಗಿದೆ.
ಕತ್ತಲಾದರೂ ಮನೆಗೆ ಬಾರದ ಮಕ್ಕಳಿಗಾಗಿ ಪೋಷಕರು ಹುಡುಕಾಟ ನಡೆಸಿದಾಗ ಈಜಲು ಹೋಗಿದ್ದ ಮಾಹಿತಿ ಲಭಿಸಿತ್ತು. ರಾತ್ರಿ ಕೆರೆಯ ಸುತ್ತ ಪರಿಶೀಲಿಸಿದಾಗ ಮಕ್ಕಳ ಬಟ್ಟೆಗಳು ಮಾತ್ರ ಕಂಡುಬಂದು ಅಗ್ನಿಶಾಮಕದಳ ಮತ್ತು ಸರ್ಜಾಪುರ ಪೊಲೀಸರು ನೀರಿಗಿಳಿದಾಗ ಹುಡುಕಾಡಿದಾಗ ಮಕ್ಕಳಿಬ್ಬರ ಮೃತದೇಹಗಳು ಪತ್ತೆಯಾಗಿವೆ.