ರಾಜ್ಯಪಾಲರಿಗೆ ದೂರು ನೀಡಿದ್ದು ಸರಿಯಲ್ಲ: ಈಶ್ವರಪ್ಪ ನಡೆಗೆ ಗೃಹ ಸಚಿವ ಬೊಮ್ಮಾಯಿ ಅಸಮಾಧಾನ
ಬೆಂಗಳೂರು, ಎ. 1: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸರಕಾರದ ವಿರುದ್ಧ ಯಾವುದೇ ಅಸಮಾಧಾನವಿದ್ದರೆ, ಅದನ್ನು ಸರಕಾರ ಮತ್ತು ಪಕ್ಷದ ವೇದಿಕೆಯಲ್ಲೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ರಾಜ್ಯಪಾಲರಿಗೆ ದೂರು ನೀಡಿದ್ದು ಸರಿಯಲ್ಲ' ಎಂದು ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಆಕ್ಷೇಪಿಸಿದ್ದಾರೆ.
ಗುರುವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಶಿಸ್ತಿನ ಉಲ್ಲಂಘನೆಯನ್ನು ಯಾರೂ ಮಾಡಬಾರದು. ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಸರಕಾರ ರಚನೆಯಾಗಿದೆ. ಅವರ ಮಾರ್ಗದರ್ಶನದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದೇವೆ' ಎಂದು ತಿಳಿಸಿದರು.
‘ಸರಕಾರದ ವಿಚಾರಗಳ ಬಗ್ಗೆ ಯಾವುದೇ ಸಮಸ್ಯೆ, ಸಂದೇಹಗಳಿದ್ದರೆ ಸಚಿವ ಸಂಪುಟ ಅಥವಾ ಸರಕಾರದ ವೇದಿಕೆಗಳಲ್ಲಿ ಚರ್ಚೆ ಮಾಡಬಹುದು. ರಾಜ್ಯಪಾಲರ ಬಳಿ ಹೋಗುವ ಹೊಸ ಪದ್ಧತಿ ಸಲ್ಲ' ಎಂದು ಆಕ್ಷೇಪಿಸಿದ ಬಸವರಾಜ ಬೊಮ್ಮಾಯಿ, ‘ಅನುದಾನ ಬಿಡುಗಡೆ ಆಗಿಲ್ಲ ಎಂದು ಶಾಸಕರಿಂದ ದೂರುಗಳು ಬಂದ ಕಾರಣ, ಹಣಕಾಸು ಸಚಿವರೂ ಆಗಿರುವ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ' ಎಂದು ಸಮರ್ಥನೆ ಮಾಡಿದರು.
‘ಏನೇ ಸಮಸ್ಯೆಗಳಿದ್ದರೂ, ಸಚಿವ ಈಶ್ವರಪ್ಪನವರು ಸಿಎಂ ಅವರೊಂದಿಗೆ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವರಿಷ್ಠರ ಬಳಿಯಾಗಲಿ ಅಥವಾ ರಾಜ್ಯಪಾಲರ ಬಳಿ ಹೋಗುವ ಅಗತ್ಯವಿಲ್ಲ' ಎಂದ ಸಚಿವ ಬಸವರಾಜ ಬೊಮ್ಮಾಯಿ, ‘ಸಿಎಂ ಹಣಕಾಸು ಸಚಿವರು ಆಗಿರುವುದರಿಂದ ನೇರವಾಗಿ ಹಣ ಬಿಡುಗಡೆ ಮಾಡುವ ಅಧಿಕಾರ ಇದೆ. ಸಂಬಂಧಪಟ್ಟ ಸಚಿವರ ಜವಾಬ್ದಾರಿಯೂ ಅಷ್ಟೇ ಇದೆ' ಎಂದು ಹೇಳಿದರು.
‘ನೆರೆ ಮತ್ತು ಕೋವಿಡ್ ಕಾರಣದಿಂದ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಹಣಕಾಸು ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಾಲ್ಕೈದು ತಿಂಗಳಲ್ಲಿ ಆರ್ಥಿಕ ಸ್ಥಿತಿ ಚೇತರಿಕೆಯಾಗಿದೆ. ಈ ಹಂತದಲ್ಲಿ ಬದ್ಧ ವೆಚ್ಚವನ್ನು ಪರಿಶೀಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಹಣ ಬಿಡುಗಡೆ ಮಾಡಿದ್ದಾರೆ' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.