ಚಿಕ್ಕಮಗಳೂರು: ಸ್ನೇಹಿತರ ಜೊತೆ ಈಜಲು ತೆರಳಿದ್ದ ಯುವಕ ನೀರುಪಾಲು
ಚಿಕ್ಕಮಗಳೂರು, ಎ.1: ಭದ್ರಾ ಡ್ಯಾಮ್‍ನ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರ ಪೈಕಿ ಓರ್ವ ಯುವಕ ನೀರು ಪಾಲಾಗಿರುವ ಘಟನೆ ಗುರುವಾರ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಾರಿದಿಬ್ಬ ಗ್ರಾಮದಲ್ಲಿ ವರದಿಯಾಗಿದೆ.
ಶಿವಮೊಗ್ಗ ಮೂಲದ ಮುಹಮ್ಮದ್ ಸಲ್ಮಾನ್(18) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ. ಶಿವಮೊಗ್ಗದಿಂದ ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದ ಸಲ್ಮಾನ್ ತನ್ನ ಸ್ಮೇಹಿತರೊಂದಿಗೆ ನರಸಿಂಹರಾಜಪುರ ತಾಲೂಕಿನ ಮಾರಿದಿಬ್ಬ ಎಂಬಲ್ಲಿ ಭದ್ರಾ ಡ್ಯಾಮ್‍ನ ಹಿನ್ನೀರಿನಲ್ಲಿ ಈಜಲು ನೀರಿಗಿಳಿದಿದ್ದಾರೆ. ತನ್ನ ಸ್ನೇಹಿತರೊಂದಿಗೆ ನೀರಿನಲ್ಲಿ ಈಜುತ್ತಿದ್ದ ವೇಳೆ ನೀರಿನ ಆಳ ಅರಿಯದೇ ಮುಂದೆ ಸಾಗಿದ ಸಲ್ಮಾನ್ ಸ್ನೇಹಿರು ನೋಡುತ್ತಿದ್ದಂತೆ ನೀರು ಪಾಲಾಗಿದ್ದಾನೆಂದು ತಿಳಿದು ಬಂದಿದೆ.
ನೀರಿನಲ್ಲಿ ಸಲ್ಮಾನ್ ಮುಳುಗುತ್ತಿದ್ದ ವೇಳೆ ನೀರಿಗಿಳಿಯದೇ ದಡದಲ್ಲಿದ್ದ ಸ್ನೇಹಿತರು ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ಸಲ್ಮಾನ್ ಈಜಲಾಗದೇ ಒದ್ದಾಡುತ್ತಿರುವ ದೃಶ್ಯ ಸೆರೆಯಾಗಿದೆ. ನೀರು ಪಾಲಾಗಿದ್ದ ಯುವಕನಿಗಾಗಿ ಸ್ಥಳೀಯರು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆ ಸಂಬಂಧ ಎನ್.ಆರ್,ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.