×
Ad

ಮೆಟ್ರೋ ಯೋಜನೆಯಲ್ಲಿ ನಿಯಮಗಳ ಉಲ್ಲಂಘನೆ: ಐಐಎಂ ನೇಮಿಸಲು ಹೈಕೋರ್ಟ್ ನಿರ್ದೇಶನ

Update: 2021-04-01 18:02 IST

ಬೆಂಗಳೂರು, ಎ.1: ಮೆಟ್ರೋ ರೈಲು ಯೋಜನೆಯ ಮೊದಲನೆ ಹಂತ ಹಾಗೂ ಎರಡನೆ ಹಂತಗಳಲ್ಲಿ ಕೇಂದ್ರದ ನಿಯಮಾವಳಿಗಳನ್ನು ಪಾಲಿಸಿರುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು(ಐಐಎಂ) ಸಂಸ್ಥೆಯನ್ನು ನೇಮಕ ಮಾಡುವಂತೆ ಹೈಕೋರ್ಟ್ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‍ಸಿಎಲ್)ಗೆ ನಿರ್ದೇಶಿಸಿದೆ.

ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ಜಾರಿ ಮಾಡುವ ಮೊದಲು ಕೇಂದ್ರ ಸರಕಾರ ವಿಧಿಸಿದ್ದ ನಿಯಮಗಳನ್ನು ಯೋಜನೆ ಅನುಷ್ಠಾನದ ವೇಳೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ, ಬೆಂಗಳೂರಿನ ಪರಿಸರವಾದಿ ಡಿ.ಟಿ.ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.

ಪೀಠ ತನ್ನ ನಿರ್ದೇಶನದಲ್ಲಿ, ನಮ್ಮ ಮೆಟ್ರೋ ಮೊದಲನೆ ಮತ್ತು ಎರಡನೆ ಹಂತಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಬಿಎಂಆರ್‍ಸಿಎಲ್ ಅಧಿಕಾರಿಗಳು ಐಐಎಂಗೆ ಒದಗಿಸಿಕೊಡಬೇಕು. ಈ ದಾಖಲೆಗಳು ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳನ್ನು ತಪಾಸಣೆ ಮಾಡಬೇಕು. ಒಪ್ಪಂದದ ನಿಯಮಗಳ ಪ್ರಕಾರ ಯೋಜನೆ ಅನುಷ್ಠಾನಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಐಐಎಂ ವರದಿ ನೀಡಬೇಕು ಎಂದು ನಿರ್ದೇಶಿಸಿದೆ.

ಅರ್ಜಿಯಲ್ಲಿ ಏನಿದೆ: ಅರ್ಜಿದಾರರು ನಮ್ಮ ಮೆಟ್ರೋ ಮೊದಲನೆ ಹಂತಕ್ಕೆ 2006ರ ಮೇ 11ರಂದು ಮಂಜೂರಾತಿ ನೀಡಿ, 2010ರ ಡಿ.24ರಂದು ಒಪ್ಪಂದಕ್ಕೆ ಬಿಎಂಆರ್ ಸಿಎಲ್ ಸಹಿ ಹಾಕಿತ್ತು. ಎರಡನೆ ಹಂತದ ಯೋಜನೆಗೆ 2014ರ ಫೆ.21ರಂದು ಮಂಜೂರಾತಿ ನೀಡಿ, 2017ರ ಫೆ.24ರಂದು ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದಗಳಲ್ಲಿ ಹೇಳಲಾಗಿದ್ದ ಸಮಗ್ರ ಸಾರಿಗೆ ಯೋಜನೆ ಹಾಗೂ ಸಂಚಾರ ವ್ಯವಸ್ಥೆಯ ಸುಧಾರಣೆ ಕುರಿತ ಯೋಜನೆಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಒಪ್ಪಂದದಂತೆ ಯೋಜನೆಗಳನ್ನು ರೂಪಿಸಲು ಸರಕಾರ ಹಾಗೂ ಬಿಎಂಆರ್ ಸಿಎಲ್‍ಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News