×
Ad

ಮಂಗಳೂರು- ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ: ಸಚಿವ ಆನಂದ್ ಸಿಂಗ್

Update: 2021-04-01 18:33 IST

ಬೆಂಗಳೂರು, ಎ.1: ಮಂಗಳೂರು ಹಾಗೂ ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಇನ್ನು 15-20 ದಿನಗಳಲ್ಲಿ ಈ ಎರಡು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿ ಆದಷ್ಟು ಬೇಗ ಹಜ್ ಭವನ ನಿರ್ಮಾಣ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹೇಳಿದರು.

ಗುರುವಾರ ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ವಕ್ಫ್ ಹಾಗೂ ಹಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಜ್ ಮತ್ತು ವಕ್ಫ್ ಇಲಾಖೆಗೆ 250 ಕೋಟಿ ರೂ.ಗಳ ಅನುದಾನ ಅಗತ್ಯವಿದ್ದು, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 150 ಕೋಟಿ ರೂ.ಗಳನ್ನು ಒದಗಿಸಿದ್ದಾರೆ ಎಂದರು.

ಅನುದಾನದ ಕೊರತೆ ಎದುರಾಗಿರುವುದರಿಂದ ಹೆಚ್ಚುವರಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಲಾಗುವುದು. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಆನಂದ್ ಸಿಂಗ್ ಹೇಳಿದರು.

ಜಿಲ್ಲಾ ವಕ್ಫ್ ಸಲಹಾ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವ ಸವಾಲು ನಮ್ಮ ಮುಂದಿದೆ. ವಕ್ಫ್ ಬೋರ್ಡ್ ನ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದಷ್ಟು ಬೇಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗಳನ್ನು ರಚನೆ ಮಾಡಲಾಗುವುದು. ಜೊತೆಗೆ ಡಾ.ಮುಹಮ್ಮದ್ ಯೂಸುಫ್ ಅವರ ನಿಧನದಿಂದ ತೆರವಾಗಿರುವ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಚರ್ಚೆ ನಡೆಸಿದ್ದು, ಕಾನೂನು ತಜ್ಞರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಎಂಬಾರ್‍ಕೇಷನ್ ಪಾಯಿಂಟ್ ಆರಂಭಿಸುವ ಕುರಿತು ಚರ್ಚೆ ನಡೆಸಲಾಗಿದೆ. ಬಳ್ಳಾರಿಯಲ್ಲಿಯೂ 3500 ಮೀಟರ್ ಉದ್ದದ ರನ್‍ವೇ ಹೊಂದಿರುವ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಅಲ್ಲಿಯೂ ಅಂತರ್‍ರಾಷ್ಟ್ರೀಯ ವಿಮಾನಗಳ ಹಾರಾಟ ಸಾಧ್ಯವಾಗಲಿದೆ. ಆದುದರಿಂದ, ಬಳ್ಳಾರಿಯಲ್ಲಿಯೂ ಎಂಬಾರ್‍ಕೇಷನ್ ಪಾಯಿಂಟ್ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಆನಂದ್ ಸಿಂಗ್ ಹೇಳಿದರು.

ಇಲ್ಲಿರುವ ಹಜ್ ಭವನ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಆದರೆ, ಸರಕಾರದ ಅನುದಾನ ಇಲ್ಲದೆ ಇರುವುದರಿಂದ ಹಜ್ ಭವನದ ನಿರ್ವಹಣೆ ಕಷ್ಟವಾಗುತ್ತಿದೆ. ವಕ್ಫ್ ಬೋರ್ಡ್ ನಲ್ಲಿರುವ ಆದಾಯ ಬರುವಂತಹ ಆಸ್ತಿಯನ್ನು ಹಜ್ ಸಮಿತಿಗೆ ನೀಡಿದರೆ, ನಮ್ಮಲ್ಲಿ ಲಭ್ಯವಿರುವ ಅನುದಾನದಿಂದ ಆ ಆಸ್ತಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ, ಅದರಿಂದ ಬರುವ ಆದಾಯವನ್ನು ಹಜ್ ಭವನದ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು ಎಂದು ವಕ್ಫ್ ಬೋರ್ಡ್ ಸದಸ್ಯರಿಗೆ ಮನವಿ ಮಾಡಲಾಗಿದೆ ಅವರು ತಿಳಿಸಿದರು.

ವಕ್ಫ್ ಬೋರ್ಡ್ ನಲ್ಲಿರುವ ಆಸ್ತಿಗಳು ದುರ್ಬಳಕೆ ಆಗದಂತೆ ತಡೆಯಲು ತನ್ವೀರ್ ಸೇಠ್ ಸಚಿವರಾಗಿದ್ದಾಗ ವಕ್ಫ್ ಆಸ್ತಿಗಳನ್ನು ಭೂಮಿ ತಂತ್ರಾಂಶದಲ್ಲಿ ಸೇರಿಸಲು ಕ್ರಮ ಕೈಗೊಂಡಿದ್ದರು. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ, ವಕ್ಫ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆನಂದ್ ಸಿಂಗ್ ಹೇಳಿದರು.

ವಕ್ಫ್ ನ್ಯಾಯಾಧೀಕರಣಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಹಜ್ ಸಮಿತಿಯ ಅವಧಿ ಮುಕ್ತಾಯಗೊಂಡಿದ್ದು, ನೂತನ ಸಮಿತಿ ರಚನೆ ಮಾಡುವಂತೆ ಈಗಾಗಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಕಡತ ಕಳುಹಿಸಿಕೊಡಲಾಗಿದೆ. ಉಪ ಚುನಾವಣೆಯ ನೀತಿ ಸಂಹಿತೆ ಮುಗಿದ ನಂತರ ಮುಖ್ಯಮಂತ್ರಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಸೈಯದ್ ನಾಸೀರ್ ಹುಸೇನ್, ತನ್ವೀರ್ ಸೇಠ್, ಕನೀಝ್ ಫಾತಿಮಾ, ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ಜಿ.ಯಾಕೂಬ್, ಆಸಿಫ್ ಅಲಿ ಶೇಕ್, ಕೆ.ಅನ್ವರ್ ಬಾಷಾ, ಮೌಲಾನ ಮೀರ್ ಅಝರ್ ಹುಸೇನ್ ಹಾಗೂ ಖಾಝಿ ನಫೀಸಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News