×
Ad

ಈಶ್ವರಪ್ಪ ವಿರುದ್ಧ ತಿರುಗಿಬಿದ್ದ ಸ್ಪಪಕ್ಷದ ನಾಯಕರು: 'ಪಕ್ಷದ ಇಮೇಜ್ ಹಾಳಾಗುತ್ತೆ' ಎಂದ ರೇಣುಕಾಚಾರ್ಯ

Update: 2021-04-01 19:41 IST

ಬೆಂಗಳೂರು, ಎ.1: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕ್ರಮ ‌ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ ವಿರುದ್ಧ ಬಿಜೆಪಿಯ ನಾಯಕರು ತಿರುಗಿ ಬಿದ್ದಿದ್ದು, 'ಈಶ್ವರಪ್ಪ ಅವರಂತಹ ಹಿರಿಯ ಸಚಿವರೇ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ ಎಂದರೆ ಹೇಗೆ? ನಾಲ್ಕು ಗೋಡೆಗಳ ನಡುವೆ ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿತ್ತು' ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 60 ಜನ ಶಾಸಕರು ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅನುದಾನಕ್ಕೆ ಮನವಿ ಮಾಡಿದ್ದರಿಂದ ಅವರು ಬಿಡುಗಡೆ ಮಾಡಿದ್ದಾರೆ. ಇದಕ್ಕೂ ಮುನ್ನ ನಾವು ಸಚಿವ ಕೆ.ಎಸ್.ಈಶ್ವರಪ್ಪರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಆದರೆ ಅವರು ಸ್ಪಂದಿಸಿರಲಿಲ್ಲ. ಹಾಗಾಗಿ ವಿಧಿಯಿಲ್ಲದೆ ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕಾಯಿತು ಎಂದು ತಿಳಿಸಿದರು.

ಈಗ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಹೀಗೆ ಮಾಡಿರುವುದರಿಂದ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲವೇ? ಪಕ್ಷದ ಇಮೇಜ್ ಹಾಳಾಗೋದಿಲ್ಲವೇ? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ನಮ್ಮಲ್ಲಿ ಏನೇ ಸಮಸ್ಯೆ ಇದ್ದರೂ ಕೂತು ಮಾತನಾಡುತ್ತೇವೆ. ನಮ್ಮಲ್ಲಿ ಹಿರಿಯರಿದ್ದಾರೆ, ವರಿಷ್ಠರು ಇದ್ದಾರೆ. ನಮ್ಮ ಸಮಸ್ಯೆಗಳನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್‍ನಲ್ಲಿ ಎಷ್ಟು ಗುಂಪುಗಳಿವೆ. ಒಂದು ಕಡೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಗುಂಪು ಹೇಳುತ್ತಿದೆ. ಮತ್ತೊಂದು ಗುಂಪು ಡಿ.ಕೆ.ಶಿವಕುಮಾರ್ ಗೆ ಜೈಕಾರ ಹಾಕುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ಗುಂಪು ಬಹುಪರಾಕ್ ಹೇಳುತ್ತಿದೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಎ ಯಿಂದ ಝೆಡ್ ವರೆಗೆ ಗುಂಪುಗಳಿವೆ. ನಮ್ಮಲ್ಲಿ ಯಾವುದೆ ಗುಂಪು ಇಲ್ಲ. ನಮ್ಮದು ಇರುವುದು ಒಂದೇ ಗುಂಪು ಅದು ಬಿಜೆಪಿ. ಕಮಲದ ಚಿಹ್ನೆಯಡಿಯಲ್ಲಿ ಗೆದ್ದಿರುವ ನಾವು ಒಂದೇ ಗುಂಪು. ನಮ್ಮ ವಿರುದ್ಧ ಆರೋಪಗಳನ್ನು ಮಾಡುವ ಬದಲು ಕಾಂಗ್ರೆಸ್‍ನವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ರೇಣುಕಾಚಾರ್ಯ ಹೇಳಿದರು.

ಬಿ.ಸಿ.ಪಾಟೀಲ್ ಅಸಮಾಧಾನ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರ್ಯವೈಖರಿಯ ಬಗ್ಗೆ ಮತ್ತು ಹಣವನ್ನು ಮಂಜೂರು ಮಾಡಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೇರವಾಗಿ ರಾಜ್ಯಪಾಲರಿಗೆ ದೂರನ್ನು ಸಲ್ಲಿಸಿರುವುದು ಸರಿಯಾದ ಕ್ರಮ ಅಲ್ಲ ಎಂದು ಬಿ.ಸಿ.ಪಾಟೀಲ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಯಾವುದೇ ವಿಷಯಗಳು ಇದ್ದರೂ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲು ಅವಕಾಶವಿದೆ. ಹೀಗಿದ್ದರೂ ಸಂಪುಟ ಸಭೆಯಲ್ಲಿ ಯಾವುದೇ ವಿಷಯವನ್ನು ಸಚಿವ ಈಶ್ವರಪ್ಪನವರು ಪ್ರಸ್ತಾಪ ಮಾಡದೆ, ಈ ರೀತಿ ನೇರವಾಗಿ ಏಕಾಏಕಿ ರಾಜ್ಯಪಾಲರಿಗೆ ದೂರು ಸಲ್ಲಿಸುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ಯಾವುದೇ ತಪ್ಪನ್ನು ಮಾಡದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ಎಷ್ಟು ಸರಿ? ಎಂದು ಸಚಿವ ಬಿ.ಸಿ.ಪಾಟೀಲ್ ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.

ಸಚಿವ ಸಿ.ಸಿ ಪಾಟೀಲ್

ಉಪ ಚುನಾವಣೆಗಳಿಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ಸ್ವಲ್ಪ ದಿನಗಳಲ್ಲೇ ನಾವು ಜನರ ಬಳಿ ಮತ ಕೇಳಲು ಹೋಗುವವರಿದ್ದೇವೆ. ಇಂತಹ ಸಂದರ್ಭದಲ್ಲಿ ಅವರು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದು ಸರಿಯಲ್ಲ’ ಎಂದು ಗದಗದಲ್ಲಿ ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.

ಇಬ್ಬರು ಹಿರಿಯ ನಾಯಕರೂ ಒಂದೇ ಜಿಲ್ಲೆಯವರು. ಅಭಿಪ್ರಾಯ ಭೇದಗಳು ಇದ್ದರೆ ಒಟ್ಟಿಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕಿತ್ತು. ಬದಲಾಗಿ ರಾಜ್ಯಪಾಲರಿಗೆ ದೂರು ನೀಡುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಮುಖ್ಯಮಂತ್ರಿಗೆ ಪರಮಾಧಿಕಾರ ಇರುತ್ತದೆ. ಎಲ್ಲ ‍‍ಪಕ್ಷಗಳ ಶಾಸಕರ ಬೇಡಿಕೆಗಳಿಗೆ ಸ್ಪಂದಿಸ ಬೇಕಿರುವ ಗುರುತರ ಜವಾಬ್ದಾರಿ ಕೂಡ ಇರುತ್ತದೆ. ಕೋವಿಡ್‌–19 ಕಾರಣದಿಂದಾಗಿ ಅನುದಾನ ಬಿಡುಗಡೆಯಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಿದೆ. ಶಾಸಕರ ಒತ್ತಡ ಮತ್ತು ಬೇಡಿಕೆಗೆ ಸ್ಪಂದಿಸಿ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ‍ಪಕ್ಷದ ಹಿರಿಯರಾದ ಕೆ.ಎಸ್‌.ಈಶ್ವರಪ್ಪ ಅವರು ಈ ವಿಷಯವನ್ನೇ ಇಷ್ಟು ದೊಡ್ಡದು ಮಾಡಬಾರದಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News