ಟ್ಯಾಕ್ಸಿ ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ
ಬೆಂಗಳೂರು, ಎ. 1: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ(ಕೆಎಸ್‍ಟಿಡಿಸಿ) ಟ್ಯಾಕ್ಸಿ ಚಾಲಕನೋರ್ವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೆ ರಾಜ್ಯ ಸರಕಾರ ಟ್ಯಾಕ್ಸಿಗಳ ಪ್ರಯಾಣ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಅಗ್ರಿಗೇಟರ್ಸ್ ನಿಯಮದಡಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಬೆಲೆ ಏರಿಕೆ ನಿಯಮ ಅನ್ವಯವಾಗಲಿದೆ. ವಾಹನಗಳ ಮೌಲ್ಯಗಳ ಆಧರಿಸಿ ಪ್ರಯಾಣ ದರವನ್ನು ನಿರ್ಧರಿಸಲು ಎ, ಬಿ, ಸಿ ಹಾಗೂ ಡಿ ಎಂದು ವರ್ಗಿಕರಿಸಲಾಗಿದೆ. ಎ ವರ್ಗ ಹೆಚ್ಚಿನ ಬೆಲೆಯುಳ್ಳ ವಾಹನಗಳಾಗಿದ್ದು ಡಿ ವರ್ಗವು ಕಡಿಮೆ ಬೆಲೆ ವಾಹನಗಳು ಎಂದು ವಿಭಜಿಸಲಾಗಿದೆ.
‘ಡಿ' ವರ್ಗ-5 ಲಕ್ಷ ರೂ. ಮೌಲ್ಯದೊಳಗಿನ ವಾಹನಗಳು-ಕನಿಷ್ಠ ನಾಲ್ಕು ಕಿಲೋಮೀಟರ್ ಗೆ 75 ರೂ.ಗಳು, ಹೆಚ್ಚುವರಿ ಪ್ರತಿಕಿ.ಮೀ.ಗೆ ಕನಿಷ್ಠ 18 ರೂ. ಮತ್ತು ಗರಿಷ್ಠ 36 ರೂ.ಗಳು. ‘ಸಿ' ವರ್ಗ-5 ಲಕ್ಷ ರೂ.ನಿಂದ 10 ಲಕ್ಷ ರೂ. ಮೌಲ್ಯದೊಳಗಿನ ವಾಹನಗಳು-ಕನಿಷ್ಠ ನಾಲ್ಕು ಕಿಲೋಮೀಟರ್ ಗೆ 100 ರೂ.-ಹೆಚ್ಚುವರಿ ಪ್ರತಿಕಿ.ಮೀ.ಗೆ ಕನಿಷ್ಠ 21ರೂ. ಮತ್ತು ಗರಿಷ್ಠ 42 ರೂ.ಗಳು.
‘ಬಿ' ವರ್ಗ-10 ಲಕ್ಷ ರೂ.ನಿಂದ 16 ಲಕ್ಷ ರೂ. ಮೌಲ್ಯದೊಳಗಿನ ವಾಹನಗಳು-ಕನಿಷ್ಠ ನಾಲ್ಕು ಕಿಲೋಮೀಟರ್ ಗೆ 120 ರೂ.ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಠ 24 ರೂ. ಮತ್ತು ಗರಿಷ್ಠ 48 ರೂ.ಗಳು. ‘ಎ' ವರ್ಗ-16 ಲಕ್ಷ ರೂ. ಮೇಲ್ಪಟ ವಾಹನಗಳು-ಕನಿಷ್ಠ ನಾಲ್ಕು ಕಿಲೋಮೀಟರ್ ಗೆ 150 ರೂ.-ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಠ 27 ರೂ.ಮತ್ತು ಗರಿಷ್ಠ 54 ರೂ.ಗಳು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಾವತಿಸಬೇಕಾಗಿರುವ ಜಿಎಸ್ಟಿ ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಯದ ಆಧಾರದಲ್ಲಿ ದರಗಳನ್ನು ವಸೂಲಿ ಮಾಡಬಾರದು. ಸರಕಾರದಿಂದ ಕಿ.ಮೀ. ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನ ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕು.
ಕಾಯುವಿಕೆ ದರಗಳನ್ನ ಮೊದಲಿನ 20 ನಿಮಿಷಗಳವರೆಗೆ ಉಚಿತವಾಗಿ, ನಂತರ ಪ್ರತಿ 15 ನಿಮಿಷಗಳಿಗೆ ಮತ್ತು ಅದರ ಭಾಗಕ್ಕೆ 10ರೂ.ನಂತೆ ನಿಗದಿಪಡಿಸಲಾಗಿದೆ. ಸರಕಾರದಿಂದ ಕಿ.ಮೀ. ಆಧಾರದಲ್ಲಿ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದರಗಳನ್ನು ಹೊರತುಪಡಿಸಿ ಅನಧಿಕೃತವಾಗಿ ಯಾವುದೇ ದರಗಳನ್ನು ಪ್ರಯಾಣಿಕರಿಂದ ಪಡೆಯತಕ್ಕದಲ್ಲ ಎಂದು ಸಾರಿಗೆ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಆದೇಶದಲ್ಲಿ ತಿಳಿಸಿದ್ದಾರೆ.