×
Ad

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸಂತ್ರಸ್ತ ಯುವತಿಯ ಸಮ್ಮುಖದಲ್ಲಿ ಸ್ಥಳ ಮಹಜರು

Update: 2021-04-01 20:35 IST

ಬೆಂಗಳೂರು, ಎ.1: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಿಟ್(ವಿಶೇಷ ತನಿಖಾ ದಳ) ತನಿಖಾಧಿಕಾರಿಗಳು ಕೃತ್ಯ ನಡೆದ ಎಂದು ಹೇಳಲಾಗುವ ಸ್ಥಳ ಸೇರಿದಂತೆ ಮೂರು ಕಡೆಗಳಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಗುರುವಾರ ಮಹಿಳಾ ಎಸಿಪಿ ನೇತೃತ್ವದಲ್ಲಿ ಸಂತ್ರಸ್ತ ಯುವತಿಯೊಂದಿಗೆ ಇಲ್ಲಿನ ಮಲ್ಲೇಶ್ವರಂ ಮಂತ್ರಿಮಾಲ್ ಬಳಿಯ ಅಪಾರ್ಟ್‍ಮೆಂಟ್‍ವೊಂದರ ಕೊಠಡಿಗೆ ಆಗಮಿಸಿದ ತನಿಖಾಧಿಕಾರಿಗಳು ಸಂತ್ರಸ್ತೆಯ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಿದರು. ಆನಂತರ, ಮುಖ್ಯದ್ವಾರದಲ್ಲಿರುವ ಭದ್ರತಾ ಸಿಬ್ಬಂದಿಯ ಕೊಠಡಿ ಪರಿಶೀಲಿಸಿ, ಅಲ್ಲಿದ್ದ ನಿವಾಸಿಗಳ ಸಹಿ ಪುಸ್ತಕ, ಸಿಸಿಟಿವಿಯ ದಾಖಲೆ, ಸ್ಥಳೀಯ ನಿವಾಸಿಗಳ ಹೇಳಿಕೆಗಳನ್ನು ಪಡೆದರು.

ಅಲ್ಲಿಂದ ಮಧ್ಯಾಹ್ನ ಸುಮಾರಿಗೆ ಸಂತ್ರಸ್ತೆ ವಾಸವಿದ್ದ ಆರ್‍ಟಿ ನಗರದ ಅತಿಥಿ ಗೃಹದ ಕೊಠಡಿಗೆ ಬಂದ ತನಿಖಾಧಿಕಾರಿಗಳು, ಆಕೆಯ ಪರಿಚಯಸ್ಥರು, ಕಟ್ಟಡದ ಮಾಲಕ, ಅಲ್ಲಿನ ಸಿಬ್ಬಂದಿಯ ಹೇಳಿಕೆಗಳನ್ನು ಪಡೆದು, ಮಾಹಿತಿ ಕಲೆಹಾಕಿದರು. ಅದೇರೀತಿ, ಮತ್ತೊಂದು ಪ್ರದೇಶಕ್ಕೆ ಸಂತ್ರಸ್ತೆಯನ್ನು ಕರೆದೊಯ್ದು ಮಹಜರು ನಡೆಸಿದರು.

ವಶಕ್ಕೆ?: ಸಂತ್ರಸ್ತ ಯುವತಿ ಸಂಬಂಧಿಸಿದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿನ ಆರ್.ಟಿ.ನಗರದಲ್ಲಿರುವ ಅತಿಥಿ ಗೃಹದ ಮಹಜರು ಸಂದರ್ಭದಲ್ಲಿ ವಶಕ್ಕೆ ಪಡೆದ ಎಲ್ಲ ವಸ್ತುಗಳನ್ನೂ ಸೀಲ್ ಮಾಡಿ ಎಫ್‍ಎಸ್‍ಎಲ್‍ ಪ್ರಯೋಗಾಲಯಕ್ಕೆ ರವಾನಿಸುವುದಾಗಿ ಹೇಳಲಾಗುತ್ತಿದೆ.

ಇನ್ನು, ಸಂತ್ರಸ್ತೆ ಹಾಗೂ ತನಿಖಾತಂಡಕ್ಕೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಗುರುವಾರ ಬೆಂಗಾವಲು ವಾಹನದೊಂದಿಗೆ ತನಿಖಾತಂಡ ಸಂಚಾರ ನಡೆಸಿತು. ಜತೆಗೆ ಮಹಜರು ನಡೆಯುವ ಸ್ಥಳದಲ್ಲಿ ಸಾರ್ವಜನಿಕರ ಓಡಾಟ ಕೆಲಕಾಲ ನಿರ್ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News