×
Ad

ಡಿನೋಟಿಫಿಕೇಷನ್ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಕುಮಾರಸ್ವಾಮಿಗೆ ಕೋರ್ಟ್ ಸಮನ್ಸ್

Update: 2021-04-01 21:17 IST

ಬೆಂಗಳೂರು, ಎ.1: ಬನಶಂಕರಿಯ ಹಲಗೆ ವಡೇರಹಳ್ಳಿಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎ.17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಜತೆಗೆ ವಿಚಾರಣೆಗೆ ಗೈರು ಹಾಜರಾದ ಎಚ್‍ಡಿಕೆ ವಿರುದ್ಧ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.  

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಎಚ್‍ಡಿಕೆ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ವಿಚಾರಣೆಗೆ ಹಾಜರಾದ ಎಚ್‍ಡಿಕೆ ಪರ ವಕೀಲರು ಮೆಮೋ ಸಲ್ಲಿಸಿ, ಕ್ವಾರಂಟೈನ್‍ನಲ್ಲಿ ಇರುವುದರಿಂದ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ವಿಚಾರಣೆಗೆ ಪದೇ ಪದೇ ಗೈರಾಗುತ್ತಿದ್ದಾರೆ. ಕ್ವಾರಂಟೈನ್ ಆಗಿದ್ದರೆ ಮನೆಯಲ್ಲಿಯೇ ಇರಬೇಕಲ್ಲವೇ, ಹೊರಗೆ ಓಡಾಡಿಕೊಂಡಿದ್ದಾರೆ ಎಂದಿತು. ಜತೆಗೆ, ಮುಂದಿನ ವಿಚಾರಣೆಗೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಿ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಎ.17ಕ್ಕೆ ಮುಂದೂಡಿತು.

ಪ್ರಕರಣವೇನು: ಎಚ್‍ಡಿಕೆ ಅವರು 2006ರಲ್ಲಿ ಸಿಎಂ ಆಗಿದ್ದಾಗ ಬನಶಂಕರಿ 5ನೆ ಹಂತದ ಹಲಗೆವಡೇರಹಳ್ಳಿಯಲ್ಲಿ 3 ಎಕರೆ 34 ಗುಂಟೆ ಜಮೀನನ್ನು ಡಿನೋಟಿಫಿಕೇಶನ್ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‍ನ್ನು ಜನಪ್ರತಿನಿಧಿ ನ್ಯಾಯಾಲಯವು ರದ್ದುಪಡಿಸಿ ವಿಚಾರಣೆಗೆ ಮುಂದಾಗಿತ್ತು. ಅ.4ರಂದು ಕುಮಾರಸ್ವಾಮಿಗೆ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ನೀಡಿತ್ತು. ಅದರ ವಿರುದ್ಧ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿ ವಿಚಾರಣೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

(ವರದಿ ಪ್ರಕಾಶ್ ಅವರಡ್ಡಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News