×
Ad

ಹೊಸದಿಲ್ಲಿ ವಕೀಲರ ಪರಿಷತ್‍ನಲ್ಲಿ ನನ್ನ ಹೆಸರು ನೋಂದಣಿಯಾಗಿದೆ: ಕೆ.ಎನ್.ಜಗದೀಶ್ ಸ್ಪಷ್ಟನೆ

Update: 2021-04-01 21:24 IST

ಬೆಂಗಳೂರು, ಎ.1: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್.ಜಗದೀಶ್ ಅವರು ಕರ್ನಾಟಕದಲ್ಲಿ ವಕೀಲ ವೃತ್ತಿ ನಡೆಸಲು ಹೆಸರನ್ನೆ ನೋಂದಾಯಿಸಿಕೊಂಡಿಲ್ಲ ಎಂಬ ರಾಜ್ಯ ವಕೀಲರ ಪರಿಷತ್(ಕೆಎಸ್‍ಬಿಸಿ) ಹೇಳಿಕೆಗೆ ಸ್ಪಷ್ಟನೆ ನೀಡಿರುವ ಜಗದೀಶ್ ತಾವು ಹೊಸದಿಲ್ಲಿಯ ವಕೀಲರ ಪರಿಷತ್‍ನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.   

ಅಲ್ಲದೆ, ಹೊಸದಿಲ್ಲಿಯ ವಕೀಲರ ಪರಿಷತ್‍ನಲ್ಲಿ ಪಡೆದುಕೊಂಡಿರುವ ಎನ್ರೋಲ್ಮೆಂಟ್ ಐಡಿ ಕಾರ್ಡ್ ನ್ನು ಫೇಸ್‍ಬುಕ್‍ನಲ್ಲೂ ಪೋಸ್ಟ್ ಮಾಡಿಕೊಂಡಿದ್ದಾರೆ.

ವಕೀಲ ಕೆ.ಎನ್ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್. ಬಸವರಾಜು ಅವರು ಪರಿಷತ್ ಮ್ಯಾನೇಜರ್ ಗೆ ಸೂಚಿಸಿದ್ದರು. ಈ ಮೇರೆಗೆ ಮಾಹಿತಿ ನೀಡಿರುವ ಪರಿಷತ್ ಮ್ಯಾನೇಜರ್, ಕೆ.ಎನ್ ಜಗದೀಶ್ ಕೆಎಸ್‍ಬಿಸಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿಲ್ಲ ಹಾಗೂ ಈ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಬಂದಿಲ್ಲ ಎಂದು ತಿಳಿಸಿದ್ದರು.

ವಕೀಲರ ಕಾಯ್ದೆ-1961ರ ನಿಯಮ 30ರ ಪ್ರಕಾರ ಯಾವುದೇ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡರೂ ಅವರು ದೇಶದ ಯಾವುದೇ ಕೋರ್ಟ್‍ನಲ್ಲಿ ವಕೀಲಿಕೆ ಮಾಡಬಹುದು. ಆದರೆ, ಕಾರ್ಯಕ್ಷೇತ್ರವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಯಿಸಿಕೊಂಡಾಗ 6 ತಿಂಗಳ ಒಳಗೆ ಯಾವ ರಾಜ್ಯದಲ್ಲಿ ವಕೀಲಿಕೆ ನಡೆಸುತ್ತಾರೋ ಅಲ್ಲಿನ ಪರಿಷತ್ತಿಗೆ ತಮ್ಮ ಸನ್ನದನ್ನು ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಭಾರತೀಯ ವಕೀಲರ ಪರಿಷತ್ತು ನಿಯಮ ಮಾಡಿದೆ.

ಮೊಯ್ಲಿಗೆ ಧನ್ಯವಾದ: ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಸಲ್ಲಿಸಿರುವ ವಕೀಲ ಕೆ.ಎನ್.ಜಗದೀಶ್ ಅವರು 2011ರಲ್ಲಿ ವೀರಪ್ಪ ಮೊಯ್ಲಿ ಕೇಂದ್ರ ಕಾನೂನು ಸಚಿವರಾಗಿದ್ದಾಗ ತಿದ್ದುಪಡಿಗೊಳಿಸಲಾದ ಅಡ್ವಕೇಟ್ ಆ್ಯಕ್ಟ್ ತಿದ್ದುಪಡಿ ತಂದಿರುವುದರಿಂದ ವಕೀಲರು ಭಾರತದ ಯಾವುದೇ ರಾಜ್ಯ ಹಾಗೂ ನ್ಯಾಯಾಲಯಗಳಲ್ಲಿ ವಾದಿಸಬಹುದು ಎನ್ನುವ ವಿಚಾರವನ್ನು ಉಲ್ಲೇಖಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News