ರೈತ ವಿರೋಧಿ ಕಾಯ್ದೆಗಳ ಪ್ರತಿಗಳನ್ನು ಸುಟ್ಟುಹಾಕಿ ಯುಗಾದಿ ಆಚರಿಸಿ: ಬಡಗಲಪುರ ನಾಗೇಂದ್ರ ಕರೆ

Update: 2021-04-01 17:24 GMT

ಮೈಸೂರು,ಎ.1: ಯುಗಾದಿಯು ರೈತ ಸಮುದಾಯದ ಹೊಸ ವರ್ಷದ ಹಬ್ಬವಾಗಿದ್ದು, ಈ ದಿನದಂದು ಪ್ರತಿ ಹಳ್ಳಿಯಲ್ಲೂ ಕೇಂದ್ರ ಸರ್ಕಾರದ ಮೂರು ರೈತ ವಿರೋಧಿ ಕೃಷಿ ಮಸೂದೆಗಳು ಮತ್ತು ರಾಜ್ಯ ಸರ್ಕಾರದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ಪ್ರತಿಗಳನ್ನು ಸುಟ್ಟು ವಿಶಿಷ್ಟವಾಗಿ ಹಬ್ಬ ಆಚರಣೆ ಮಾಡಲು ಕರ್ನಾಟಕ ರಾಜ್ಯ ರೈತ ಸಂಘ ಸಮುದಾಯಕ್ಕೆ ಕರೆ ನೀಡುತ್ತಿದೆ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಪ್ರತಿ ಹಳ್ಳಿಯಲ್ಲೂ ಗ್ರಾಮವಾಸಿಗಳು ಸಭೆ ಸೇರಿ ಈ ಮಸೂದೆಗಳ ಪ್ರತಿಗಳನ್ನು ಸುಟ್ಟು ಇವುಗಳನ್ನು ವಾಪಸ್ ಪಡೆಯುವಂತೆ ನಿರ್ಣಯ ಮಾಡುವುದರ ಮೂಲಕ ಹಬ್ಬವನ್ನು ಆಚರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಿಸಾನ್ ಮಹಾಪಂಚಾಯತ್ ಗಳನ್ನು ನಡೆಸುವಂತೆ ಎಲ್ಲಾ ಜಿಲ್ಲೆಗಳಿಂದಲೂ ರೈತ ಸಂಘಟನೆಗಳು ಸೇರಿದಂತೆ ಇತರೆ ಪ್ರಗತಿಪರ ಸಂಘಟನೆಗಳು ಕೇಳುತ್ತಿದ್ದು ಈ ಸಂಬಂಧ ಸಂಯುಕ್ತ ಹೋರಾಟ ಕರ್ನಾಟಕ ಸದ್ಯದಲ್ಲೇ ಸಭೆ ಸೇರಿ ತೀರ್ಮಾನಿಸಲಿದೆ. ಮೈಸೂರು, ಮಂಗಳೂರು, ಚಿತ್ರದುರ್ಗದಲ್ಲಿ ಮೇ ತಿಂಗಳಲ್ಲಿ ಬೃಹತ್ ಪಂಚಾಯತ್  ನಡೆಸುವ ಆಲೋಚನೆ ಇದೆ. ಜೂನ್ ತಿಂಗಳಲ್ಲಿ ಮಹಿಳಾ ಮಹಾಪಂಚಾಯತ್ ಯಾದಗಿರಿ ಅಥವಾ ರಾಯಚೂರಿನಲ್ಲಿ ನಡೆಸಬೇಕೆಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಜುಲೈ 21 ರೈತ ಹುತಾತ್ಮ ದಿನಾಚರಣೆಯಂದು ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಜನಸೇರಿ ಒಂದು ದೊಡ್ಡ ಮಟ್ಟದ ಬೃಹತ್ ಕಿಸಾನ್ ಪಂಚಾಯತ್ ಹಮ್ಮಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಅದೇ ರೀತಿ ಕೋಲಾರ, ಬಾಗಲಕೋಟ, ಬೀದರ್, ಹೊಸಪೇಟೆಗಳಲ್ಲೂ ಬೃಹತ್ ಮಟ್ಟದ ಕಿಸಾನ್ ಪಂಚಾಯತ್ ನಡೆಸಲು ಸ್ಥಳೀಯ ರಿಂದ ಒತ್ತಾಯವಿದ್ದು ರಾಜ್ಯದಾದ್ಯಂತ ಕಿಸಾನ್ ಪಂಚಾಯತ್ ಕಾರ್ಯಕ್ರಮವನ್ನು ಎಲ್ಲಿ ಹಮ್ಮಿಕೊಳ್ಳಲಾಗುವುದು ಎಂಬುದರ ಬಗ್ಗೆ ಸದ್ಯದಲ್ಲೇ ತಿಳಿಸಲಾಗುವುದು ಎಂದರು.

ಆಸ್ಪತ್ರೆಗಳ ಅವ್ಯವಸ್ಥೆ ಬಗೆಹರಿಸಿ
ಸುಮಾರು 100 ವರ್ಷ ಇತಿಹಾಸವಿರುವ ದೊಡ್ಡ ಆಸ್ಪತ್ರೆ ಎಂದೇ ಪ್ರಖ್ಯಾತವಾಗಿರುವ ಕೃಷ್ಣರಾಜೇಂದ್ರ ಆಸ್ಪತ್ರೆಯು ಮೈಸೂರು ಮಹಾರಾಜರ ದೂರದೃಷ್ಠಿಯ ಚಿಂತನೆಯ ಫಲವಾಗಿದೆ. ಆದರೆ ಇಂದು ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕೆ.ಆರ್.ಆಸ್ಪತ್ರೆ ಅವ್ಯವಸ್ಥೆಯ ಗೂಡಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಕೆ.ಆರ್.ಆಸ್ಪತ್ರೆಗೆ ಪ್ರತಿದಿನ ಸುಮಾರು 8 ಸಾವಿರ ಮಂದಿ ಭೇಟಿ ನೀಡುತ್ತಾರೆ. ಅದರಲ್ಲಿ 2 ಸಾವಿರ ಹೊರರೋಗಿಗಳು, 2 ಸಾವಿರ ಒಳ ರೋಗಿಗಳು, ಇವರ ಜೊತೆಯಲ್ಲಿ ಬರುವವರು 2 ಸಾವಿರ ಮಂದಿ ಆದರೆ ಇವರನ್ನು ನೋಡಲು ಬರುವವರು 500 ಮಂದಿಗಳಾಗಿರುತ್ತಾರೆ. ಅವರಿಗೆ ಸೂಕ್ತವಾದ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ, ಇಡೀ ವಾತಾವರಣ ಕೆಟ್ಟು ವಾಸನೆಯಿಂದ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಇಂತಹ ಅನೇಕ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಎನ್.ಪ್ರಸನ್ನ ಗೌಡ, ಶೆಟ್ಟಹಳ್ಳಿ ಚಂದ್ರೇಗೌಡ, ಪಿ.ಮರಂಕಯ್ಯ, ವಕೀಲ ಪುನೀತ್, ಸರಗೂರು ನಟರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News