ಬಂಡೀಪುರದ ಮದ್ದೂರು ವಲಯದ ಅರಣ್ಯದಲ್ಲಿ ಬೆಂಕಿ: ನೂರಾರು ಎಕರೆ ಪ್ರದೇಶ ಭಸ್ಮ
ಗುಂಡ್ಲುಪೇಟೆ, ಎ.1: ಮದ್ದೂರು ವಲಯದಲ್ಲಿ ಕರಡಿಕಲ್ಲು ಗುಡ್ಡಕ್ಕೆ ಬಿದ್ದ ಬೆಂಕಿ ಬೆಟ್ಟದ ತುದಿಯತ್ತ ವ್ಯಾಪಿಸುತ್ತಿದ್ದು ನೂರಾರು ಎಕರೆ ಅರಣ್ಯ ಭಸ್ಮವಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಡೀಪುರ ಅಭಯಾರಣ್ಯ ಮದ್ದೂರು ವಲಯಕ್ಕೆ ಸೇರಿದ ಕರಡಿಕಲ್ಲು ಗುಡ್ಡಕ್ಕೆ ಮೂರು ಬದಿಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡ ಬೆಂಕಿ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ತೆರಳಿದರೂ ಗಾಳಿಯ ರಭಸಕ್ಕೆ ಬೆಂಕಿ ವೇಗವಾಗಿ ವ್ಯಾಪಿಸುತ್ತಿದೆ.
ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ಮೂಲೆಹೊಳೆ ವಲಯಗಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡರೂ ಸ್ಥಳಕ್ಕೆ ವಾಹನಗಳು ಸಂಚರಿಸಲು ಸಾಧ್ಯವಾಗದ ಕಾರಣದಿಂದ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಹೋಗಬೇಕಾಯಿತು.
ಹಲವು ಅನುಮಾನ: ಕರಡಿಕಲ್ಲುಗುಡ್ಡ ಪ್ರದೇಶವು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವಿದ್ದು, ಯಾವುದೇ ಕಾರಣಕ್ಕೂ ಈ ಪ್ರದೇಶಕ್ಕೆ ಯಾವುದೇ ವ್ಯಕ್ತಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಆದರೂ ಈ ಸ್ಥಳದಲ್ಲಿ ಬೆಂಕಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಬಂಡೀಪುರ ಕಾಡಿಗೆ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಬಂಡೀಪುರ ಸಿ.ಎಫ್.ನಟೇಶ್, ಆರ್.ಎಫ್.ಒ. ಸುಧಾಕರ ನಾಯಕ್, ಎನ್.ಪಿ.ನವೀನ್ ಕುಮಾರ್, ಎನ್.ಸಿ.ಮಹದೇವ ಭೇಟಿ ನೀಡಿ ಬೆಂಕಿ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.