ಸಚಿವ ಬಿ.ಸಿ.ಪಾಟೀಲ್ ಮನೆಗೆ ತೆರಳಿ ಕೊರೋನ ಲಸಿಕೆ ನೀಡಿದ್ದ ಆರೋಗ್ಯಾಧಿಕಾರಿ ಅಮಾನತು

Update: 2021-04-02 11:48 GMT

ಬೆಂಗಳೂರು, ಎ.2: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನೆಗೆ ತೆರಳಿ ಕೊರೋನ ಲಸಿಕೆ ನೀಡಿದ್ದ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಕಳೆದ ಮಾ.2ರಂದು ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿ ಡಾ.ಝಡ್.ಆರ್. ಮಕಾಂದಾರ ಅವರು ಸಚಿವ ಬಿ.ಸಿ.ಪಾಟೀಲ್ ಅವರ ಮನೆಗೆ ತೆರಳಿ ಲಸಿಕೆ ನೀಡಿ ಬಂದಿದ್ದರು.

ಇದರಿಂದ ಕೊರೋನ ನಿಯಮ ಉಲ್ಲಂಘನೆಯಾಗಿದ್ದರಿಂದ ಸಾರ್ವಜನಿಕರು ಬಿ.ಸಿ.ಪಾಟೀಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಹಿರೇಕೆರೂರು ತಾಲೂಕು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸರಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ಧರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು.

ಆಸ್ಪತ್ರೆಗೆ ತೆರಳಿದ ಬಿ.ಸಿ.ಪಾಟೀಲ್: ಈ ಬಾರಿ ಬಿ.ಸಿ.ಪಾಟೀಲ್ ಅವರು ಎರಡನೆ ಬಾರಿಯ ಕೊರೋನ ಲಸಿಕೆ ಪಡೆಯಲು ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News