45 ವರ್ಷಕ್ಕಿಂತ ಮೇಲ್ಪಟ್ಟವರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆದುಕೊಳ್ಳಲಿ: ಆರೋಗ್ಯ ಸಚಿವ ಸುಧಾಕರ್
ಬೆಂಗಳೂರು, ಎ.2: ಕೋವಿಡ್ ಎರಡನೇ ತಡೆಯುವ ನಿಟ್ಟಿನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಜನರು ಸ್ವಯಂ ಪ್ರೇರಿತರಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ(ಗುರುವಾರ)ಯಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ನಿನ್ನೆ ಒಂದೇ ದಿನ 34 ಸಾವಿರ ಜನರು ಲಸಿಕೆ ಪಡೆದಿದ್ದಾರೆ. ಈವರೆಗೂ 41ಲಕ್ಷ ಜನರು ಲಸಿಕೆ ಪಡೆದಿದ್ದಾರೆ. ಇನ್ನೂ ಹೆಚ್ಚು ಜನರು ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಕೋವಿಡ್ ಆತಂಕದ ನಡುವೆಯು ಹೆಚ್ಚು ಜನರು ಒಂದೆಡೆ ಸೇರುತ್ತಿರುವುದು ರಾಜ್ಯ ಸರಕಾರಕ್ಕೆ ದೊಡ್ಡ ಸವಾಲಾಗಿದೆ ಎಂದ ಅವರು, ಮುಖ್ಯವಾಗಿ ಸಿನಿಮಾ, ಮಾರ್ಕೆಟ್ ಬಳಿ ಅನಗತ್ಯವಾಗಿ ಜನಸಂದಣಿಯಾಗುತ್ತಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿಲ್ಲ. ಕೋವಿಡ್ ಪ್ರಮಾಣ ಹೆಚ್ಚಾದರೆ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಕೋವಿಡ್ ಎರಡನೇ ಅಲೆ ತಡೆಗೆ ಸಿನೆಮಾ ಮಂದಿರ, ಬಾರ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಹಾಗೂ ಸಾರ್ವಜನಿಕರು ಸರಕಾರ ಸೂಚಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.