ಸಿಎಂ ಬದಲಾಗದಿದ್ದರೆ ಪಕ್ಷದಲ್ಲಿ ದೊಡ್ಡ ಸ್ಫೋಟ ಸಂಭವಿಸಲಿದೆ ಎಂದ ಬಿಜೆಪಿ ಶಾಸಕ ಯತ್ನಾಳ್

Update: 2021-04-02 12:03 GMT

ವಿಜಯಪುರ, ಎ. 2: ‘ಮೇ 2ರೊಳಗೆ ಪಕ್ಷದಲ್ಲಿ ಭಾರೀ ಸ್ಫೋಟವಾಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬದಲಾಗದಿದ್ದರೆ ಇನ್ನೂ ದೊಡ್ಡ ಸ್ಫೋಟ ಸಂಭವಿಸಲಿದೆ' ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯನ್ನು ಕಟ್ಟಿದವರು ಸಚಿವ ಕೆ.ಎಸ್.ಈಶ್ವರಪ್ಪನವರು. ಆದರೆ, ನಿನ್ನೆ, ಮೊನ್ನೆ ಪಕ್ಷಕ್ಕೆ ಬಂದವರು, ಇದೀಗ ಅವರ ವಿರುದ್ಧ ಮನಸೋ ಇಚ್ಛೆ ಮಾತನಾಡುವುದು ಸರಿಯಲ್ಲ. ನಾನು ಮತ್ತು ಯಡಿಯೂರಪ್ಪನವರು ಪಕ್ಷ ತೊರೆದು ಬಿಜೆಪಿಗೆ ಬಂದವರು. ಆದರೆ, ಈಶ್ವರಪ್ಪನವರು ಬಿಜೆಪಿಯಲ್ಲೇ ಇದ್ದವರು' ಎಂದು ಹೇಳಿದರು.

‘ಹಿರಿಯರು ಹಾಗೂ ಸಂಪುಟ ದರ್ಜೆ ಸಚಿವರಿಗೆ ಅಧಿಕಾರ ಇಲ್ಲದಿದ್ದಾಗ ಕೆ.ಎಸ್.ಈಶ್ವರಪ್ಪನವರು ಏನು ಮಾಡಬೇಕು? ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ಪರವಿದ್ದಾರಾ? ಅಥವಾ ಬಿ.ಎಸ್. ಯಡಿಯೂರಪ್ಪನವರ ಪರವಿದ್ದಾರಾ?' ಎಂದು ಪ್ರಶ್ನಿಸಿದ ಯತ್ನಾಳ್, ‘ಸಿಎಂ ಬಿಎಸ್‍ವೈಗೆ ಅರುಣ್ ಸಿಂಗ್ ಏಕೆ ನಿರ್ದೇಶನ ನೀಡುವುದಿಲ್ಲ?' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಚಿವ ಕೆ.ಎಸ್.ಈಶ್ವರಪ್ಪ ಮಾಡಿದ್ದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಅರುಣ್ ಸಿಂಗ್ ಈ ರೀತಿಯಾಗಿ ಹೇಳಬಾರದಿತ್ತು. ಅವರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ನೀಡಿದ್ದಾರೆ. ಬದಲಿಗೆ ಸಿಎಂ ಯಡಿಯೂರಪ್ಪ ಅವರ ಉಸ್ತುವಾರಿ ನೀಡಿಲ್ಲ' ಎಂದು ಯತ್ನಾಳ್, ಅರುಣ್ ಸಿಂಗ್ ವಿರುದ್ಧ ಕಿಡಿಕಾರಿದರು.

ಸಿಂಗ್ ಜೀ ಕ್ಯಾ ಚಲ್ ರಹಾ ಹೇ?: ‘ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಬರುತ್ತಾರೆ. ಬಂದಾಗಲೆಲ್ಲ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರನಿಗೆ ಶಹಬ್ಬಾಸ್‍ಗಿರಿ ಕೊಡುತ್ತಾರೆ. ಇಲ್ಲಿ ಏನು ನಡೆಯುತ್ತಿದೆ ಅರುಣ್ ಸಿಂಗ್ ಅವರೇ? ‘ಅರುಣ್‍ಸಿಂಗ್ ಜೀ ಕರ್ನಾಟಕ ಕೋ ಆತೇ ಹೋ.. ಯಡಿಯೂರಪ್ಪ ಕೋ ಔರ್ ಉನಕಾ ಬೇಟೆಕೋ ಶಹಬ್ಬಾಸಿ ದೇಕೇ ಚಲೆ ಜಾತೇ ಹೇ.. ಏ ಕ್ಯಾ ಚಲ್ ರಹಾಹೇ ಅರುಣ್‍ಸಿಂಗ್ ಜೀ' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಇದು ಪಕ್ಷದ ವಿರುದ್ಧ ಸಹಿ ಸಂಗ್ರಹ ಮಾಡಿದಂತಾಗುತ್ತದೆ. ಸಚಿವ ಈಶ್ವರಪ್ಪ ಮಾಡಿರುವ ತಪ್ಪಾದರೂ ಏನು? ಈಶ್ವರಪ್ಪ ಅವರಿಗೆ ಒಂದು ವರ್ಷದಿಂದ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಮೋದಿ ಕನಸಿನ ಸರಕಾರ ಅಲ್ಲ

ಅಪ್ಪ-ಮಗ ‘ಕಾವೇರಿ'ಯಲ್ಲಿ ಕುಳಿತು ದಂಧೆ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಅವರು ವಸೂಲಿ ಮಾಡುತ್ತಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ? ರಾಜ್ಯದಲ್ಲಿ ಪ್ರಧಾನಿ ಮೋದಿ ಕನಸಿನ ಬಿಜೆಪಿ ಸರಕಾರ ಇಲ್ಲ. ಬದಲಿಗೆ ಇಲ್ಲಿ ಅಪ್ಪ-ಮಕ್ಕಳ ಸರಕಾರ ಅಧಿಕಾರದಲ್ಲಿದೆ.

-ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News