×
Ad

ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ: ಬೆಂಗಳೂರು, ದ.ಕ, ಉಡುಪಿ ಸೇರಿ 8 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ

Update: 2021-04-02 18:53 IST

ಬೆಂಗಳೂರು, ಎ. 2: ‘ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಎರಡನೆ ಅಲೆ ತೀವ್ರ ಸ್ವರೂಪದಲ್ಲಿ ಹರಡುತ್ತಿದ್ದು, ಸೋಂಕು ತಡೆಗಟ್ಟಲು ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‍ಡೌನ್ ಹಾಗೂ ನೈಟ್ ಕರ್ಫ್ಯೂ ವಿಧಿಸುತ್ತಿಲ್ಲ' ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಕೊರೋನ ನಿಯಂತ್ರಣ ಸಂಬಂಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಸರಕಾರದ ಸಚಿವ ಸಂಪುಟ ಕಾರ್ಯದರ್ಶಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಸಂಬಂಧ ಹೊಸ ಆದೇಶ ಹೊರಡಿಸಿರುವ ಅವರು, ‘ಲಾಕ್‍ಡೌನ್ ಹೇರುವುದಿಲ್ಲ. ಆದರೆ, ಕೋವಿಡ್ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದರು.

ಶಾಲೆಗಳ ಸ್ಥಗಿತ: ವಿದ್ಯಾಗಮ ಸೇರಿದಂತೆ 6ರಿಂದ 9ನೆ ತರಗತಿ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. 10, 11 ಮತ್ತು 12ನೆ ತರಗತಿ ಪ್ರಸ್ತುತ ಇರುವಂತೆಯೇ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ.

ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯ/ವಿ.ವಿ.ಗಳ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ, ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11, 12ನೆ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರ ಎಲ್ಲ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಎಂಟು ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಬಿಬಿಎಂಪಿ ಸೇರಿದಂತೆ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರ್ಗಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಿನಿಮಾ ಹಾಲ್‍ಗಳಲ್ಲಿ ಪರ್ಯಾಯ ಆಸನಗಳಲ್ಲಿ ಗರಿಷ್ಠ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶ. ಅಲ್ಲದೆ, ಮೇಲ್ಕಂಡ ಜಿಲ್ಲೆಗಳಲ್ಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‍ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ.50ರಷ್ಟು ಮೀರುವಂತಿಲ್ಲ.

ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಬೆಡ್ ನಿಗದಿ ಮಾಡಲು ನಿರ್ಧರಿಸಲಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದು, ಲಸಿಕೆ ಹೆಚ್ಚಿಸಲು ಸೂಚನೆ ನೀಡಿದ್ದು, ಹೆಚ್ಚು ಜನ ಇರುವ ಕಡೆ ಲಸಿಕೆ ಹಾಕಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಸೂಚಿಸಿದ್ದಾರೆ.

ಜಿಮ್, ಈಜುಕೊಳ ಬಂದ್: ರಾಜ್ಯಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿದೆ. ಆದರೆ, ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ ಸಾಮಾನ್ಯವಾಗಿ ನಿವಾಸಿಗಳು/ಜನರು ಸೇರುವ ಸ್ಥಳಗಳಾದ ಪಾರ್ಟಿ ಹಾಲ್‍ಗಳು/ ಕ್ಲಬ್‍ಗಳು, ಈಜುಕೊಳಗಳು, ಎಲ್ಲ ಜಿಮ್‍ಗಳನ್ನು ಮುಚ್ಚಲ್ಟಟ್ಟಿರುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಧರಣಿ/ಪ್ರತಿಭಟನೆ ನಿಷೇಧ: ಯಾವುದೇ ರೀತಿಯ ಪ್ರತಿಭಟನೆ, ರ್‍ಯಾಲಿ, ಮುಷ್ಕರ, ಧರಣಿ ಸತ್ಯಾಗ್ರಹಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಗದಿಪಡಿಸಿದ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ. ಕಚೇರಿ ಹಾಗೂ ಇತರೆ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸುವ ಅಭ್ಯಾಸ/ವ್ಯವಸ್ಥೆಯನ್ನು ಪಾಲಿಸುವುದು.

ಗುಂಪು ಸೇರಲು ಅವಕಾಶವಿಲ್ಲ: ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು ಹಾಗೂ ಜಾತ್ರೆ ಮಹೋತ್ಸವಗಳ, ಮೇಳಗಳು, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ವಿವಿಧ ಸಭೆ/ಸಮಾರಂಭಗಳಲ್ಲಿ ಭಾಗವಹಿಸುವ ಸಂಬಂಧ ಮಾರ್ಚ್ 12ರ ಸುತ್ತೋಲೆ ಮುಂದುವರಿಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ನಿಯಮ ಪಾಲನೆಗೆ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಶಾಪಿಂಗ್ ಮಾಲ್‍ಗಳು, ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್‍ಗಳು ಹಾಗೂ ಡಿಪಾಟ್‍ಮೆಂಟಲ್ ಸ್ಟೋರ್ ಗಳಲ್ಲಿ ಶಿಷ್ಟಾಚಾರದನ್ವಯ ಕೋವಿಡ್ ಮುನ್ನೆಚ್ಚರಿಕೆ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಮೇಲ್ಕಂಡ ಸ್ಥಳಗಳನ್ನು ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೂ ಮುಚ್ಚಲಾಗುವುದು ಎಂದು ಎಚ್ಚರಿಸಿರುವ ಅವರು, ಈ ತಿಂಗಳ 20ರವರೆಗೆ ಕೋವಿಡ್ ಹೊಸ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

‘ಕೊರೋನ ಎರಡನೆ ಅಲೆ ನಿಯಂತ್ರಿಸಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಸಾರ್ವಜನಿಕರು ಈ ಸುರಕ್ಷಾ ಕ್ರಮಗಳನ್ನು ತಪ್ಪದೆ ಪಾಲಿಸಿ ಕೋವಿಡ್ ಸೋಂಕು ಹಿಮ್ಮೆಟ್ಟಿಸಲು ಸಹಕರಿಸಬೇಕು ಎಂದು ಕೋರುತ್ತೇನೆ. ಎಲ್ಲರೂ ಲಸಿಕೆ ಹಾಕಿಸಿ, ಮುನ್ನಚ್ಚರಿಕೆಯೂ ಪಾಲಿಸಿ'

-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News