ಮುಖ್ಯಮಂತ್ರಿಯ ಪರಮಾಧಿಕಾರ ಪ್ರಶ್ನಿಸುವುದು ಸರಿಯಲ್ಲ: ಡಿಸಿಎಂ ಕಾರಜೋಳ

Update: 2021-04-02 14:39 GMT

ಬೆಳಗಾವಿ, ಎ.2: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಯ ನಿರ್ದೇಶನದಂತೆ ಇಡೀ ಸಚಿವ ಸಂಪುಟ ಒಮ್ಮತದಿಂದ ಕೆಲಸ ಮಾಡಬೇಕು. ಅವರ ಪರಮಾಧಿಕಾರವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ರಾಜ್ಯದ 33 ಇಲಾಖೆಗಳಿಗೂ ಮುಖ್ಯಮಂತ್ರಿ ಅನುದಾನ ಹಂಚಿಕೆ ಮಾಡಿರುತ್ತಾರೆ. ಬಜೆಟ್‍ನಲ್ಲಿ 224 ಕ್ಷೇತ್ರಗಳಿಗೂ ಅನುದಾನವನ್ನು ಹಂಚಿಕೆ ಮಾಡುವುದು ಕಷ್ಟದ ಕೆಲಸ. ಆದುದರಿಂದ, ಶಾಸಕರು, ಸಂಸದರು ಅನುದಾನ ಕೋರಿ ನಮ್ಮ ಬಳಿ ಬಂದಾಗ ಅನುದಾನಕ್ಕಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಕೇಳಿ ಎಂದು ಹೇಳುತ್ತೇವೆ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದಿರುವ ಬೆಳವಣಿಗೆ ಕುರಿತು ನಾನು ಸಚಿವ ಈಶ್ವರಪ್ಪ ಜೊತೆ ಯಾವುದೆ ಚರ್ಚೆ ಮಾಡಿಲ್ಲ. ಸಚಿವ ಸಂಪುಟದಲ್ಲಿ ಇರುವ ನಾವೆಲ್ಲರೂ ಮುಖ್ಯಮಂತ್ರಿಯ ನಿರ್ದೇಶನದಂತೆ ಕೆಲಸ ಮಾಡಬೇಕಾಗುತ್ತದೆ. ಅವರ ಪರಮಾಧಿಕಾರವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಗೋವಿಂದ ಕಾರಜೋಳ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News