ವಿಪರೀತ ಜ್ವರವಿದೆ, ಎ.5ರಂದು ವಿಚಾರಣೆಗೆ ಹಾಜರಾಗುತ್ತೇನೆ: ರಮೇಶ್ ಜಾರಕಿಹೊಳಿ

Update: 2021-04-02 14:56 GMT

ಬೆಂಗಳೂರು, ಎ.2: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಿಟ್(ವಿಶೇಷ ತನಿಖಾ ದಳ) ತನಿಖಾಧಿಕಾರಿಗಳು ಸಂತ್ರಸ್ತ ಯುವತಿಯ ವಿಚಾರಣೆ ಪ್ರಕ್ರಿಯೆಯನ್ನು ಶುಕ್ರವಾರ ಕೂಡ ಮುಂದುವರೆಸಿದ್ದಾರೆ.

ಎ.2ರಂದು ಸಂತ್ರಸ್ತ ಯುವತಿಯು ಬೆಳಗ್ಗೆ 12.30ಕ್ಕೆ ಆಡುಗೋಡಿಯಲ್ಲಿರುವ ಸಿಬಿಐಯ ತಾಂತ್ರಿಕ ವಿಭಾಗದ ವಿಚಾರಣಾ ಕೊಠಡಿಗೆ ಆಗಮಿಸಿದರು. ತನಿಖಾಧಿಕಾರಿ ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ಸತತ 5 ಗಂಟೆಗಳ ಕಾಲ ಗುರುವಾರ ನಡೆದ ಸ್ಥಳ ಮಹಜರು ಪ್ರಕ್ರಿಯೆ ಹಾಗೂ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಸೇರಿ ಮೂರು ಕಡೆ ದಾಖಲಾದ ಪ್ರಕರಣಗಳ ಆಧರಿಸಿ ಸಂತ್ರಸ್ತ ಯುವತಿಯಿಂದ ಹೇಳಿಕೆಗಳನ್ನು ಪಡೆದುಕೊಂಡರು.

ಎ.5ರಂದು ವಿಚಾರಣೆಗೆ ಹಾಜರಾಗುತ್ತೇನೆ: ಶಾಸಕ ರಮೇಶ್ ಜಾರಕಿಹೊಳಿ ಅವರು ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎ.2ರಂದು ವಿಚಾರಣೆಗಾಗಿ ಆಡುಗೋಡಿಯ ತಾಂತ್ರಿಕ ಕೇಂದ್ರಕ್ಕೆ ಹಾಜರಾಗಬೇಕಿತ್ತು. ಆದರೆ, ನನಗೆ ವಿಪರೀತ ಜ್ವರವಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ವಿಚಾರಣೆಗೆ ಬರಲು ಆಗುತ್ತಿಲ್ಲ, ಎ.5ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಈ ಎಲ್ಲ ವಿಚಾರ ಇರುವ ಪತ್ರವನ್ನು ರಮೇಶ್ ಅವರು ತಮ್ಮ ವಕೀಲ ಶ್ಯಾಮ್‍ಸುಂದರ್ ಅವರ ಮೂಲಕ ಎಸ್‍ಐಟಿ ಅಧಿಕಾರಿಗಳಿಗೆ ತಲುಪಿಸಿದ್ದಾರೆ.

ಗೋಕಾಕ್‍ನಲ್ಲಿ ಜಾರಕಿಹೊಳಿ: ಅಶ್ಲೀಲ ಸಿಡಿ ಪ್ರಕರಣ ಸಂಬಂಧ ರಮೇಶ ಜಾರಕಿಹೊಳಿ ಅವರಿಗೆ ಯಾವುದೇ ಬಂಧನದ ಭೀತಿಯಿಲ್ಲ. ಜ್ವರ ಕಾಣಿಸಿಕೊಂಡ ಕಾರಣ ಹೊರಗೆ ಕಾಣಿಸುತ್ತಿಲ್ಲ. ಸದ್ಯ ಅವರು ಗೋಕಾಕ್‍ನಲ್ಲೇ ಇದ್ದಾರೆ. ಎರಡು ದಿನದ ನಂತರ ವಿಚಾರಣೆ ನಡೆಸುವಂತೆ ಕೋರಿ ಕಾಲಾವಕಾಶ ಕೇಳಿದ್ದೇವೆ. ಪರಿಶೀಲಿಸಿ ವಿಚಾರಣೆಯ ಮುಂದಿನ ದಿನಾಂಕದ ಬಗ್ಗೆ ನೋಟಿಸ್ ನೀಡುವುದಾಗಿ ಎಸ್‍ಐಟಿ ಅಧಿಕಾರಿಗಳು ಹೇಳಿದ್ದಾರೆ ಎಂದು ಹೈಕೋರ್ಟ್ ವಕೀಲ ಶ್ಯಾಮ್‍ಸುಂದರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News