×
Ad

ರಾಜ್ಯದಲ್ಲಿ ಬಿಜೆಪಿ ಸರಕಾರದ ತುಘಲಕ್ ದರ್ಬಾರ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-04-02 21:23 IST

ಬೆಂಗಳೂರು, ಎ. 2: ‘ರಾಜ್ಯ ಬಿಜೆಪಿ ಸರಕಾರದ ಆಡಳಿತ ತುಘಲಕ್ ದರ್ಬಾರ್ ಇದ್ದಂಗೆ. ಇಲ್ಲಿ ಆರೋಪಿಗೆ ಸರಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆ ಶಿಕ್ಷೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮಂತ್ರಿ ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡರೆ, ಆರೋಗ್ಯಾಧಿಕಾರಿಗೆ ಅಮಾನತ್ತು ಶಿಕ್ಷೆ. ಅಮಾನತ್ತಾಗಬೇಕಿದ್ದಿದ್ದು ಸಚಿವ ಬಿ.ಸಿ.ಪಾಟೀಲ್ ಅಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪನವರೇ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಪ್ರಶ್ನಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಅಪಾರ. ಅವರೆದುರು ಬಿಜೆಪಿ ಮಾತಾಡುವುದು ಆನೆ ಎದುರು ಶ್ವಾನ ಬೊಗಳಿದಂತೆ. ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದ್ದು ಯಾರು ಎಂದು ಜಗತ್ತಿಗೆ ತಿಳಿದಿದೆ, ಆರ್ಟಿಕಲ್ 371‘ಜೆ' ವಿಶೇಷ ಸ್ಥಾನಮಾನಕ್ಕೆ ವಿರೋಧಿಸಿದ್ದ ನೀವು ಮೊದಲಿಂದಲೂ ಅನ್ಯಾಯವೆಸಗುತ್ತಲೇ ಬಂದಿದ್ದೀರಿ' ಎಂದು ಲೇವಡಿ ಮಾಡಿದ್ದಾರೆ.

‘ಕಲ್ಯಾಣ ಕರ್ನಾಟಕಕ್ಕೆ ಎಂದು ಮಾಡಲಾಗಿದೆ ಎನ್ನುವ ಪಟ್ಟಿಯನ್ನೂ ಕೊಡುತ್ತೇವೆ, ನೀವು ಮಾಡಿದ ಅನ್ಯಾಯಗಳ ಪಟ್ಟಿಯನ್ನೂ ಕೊಡುತ್ತೇವೆ. ಕೆಕೆಆರ್‍ಡಿಬಿಗೆ ಹಣ ಕಡಿತಗೊಳಿಸಿ, ಬಜೆಟ್‍ನಲ್ಲಿ ಅನ್ಯಾಯವೆಸಗಿದ್ದು ನೀವಲ್ಲವೇ? ಅಂದಹಾಗೆ ಲಿಂಗಾಯತ ವಿರೋಧಿ ಸಿಎಂ ಬಿಎಸ್‍ವೈ ಅವರ ಕುಟುಂಬಕ್ಕೆ ಟಿಕೆಟ್ ಕೊಡುವುದನ್ನ ಯಾವಾಗ ನಿಲ್ಲಿಸುತ್ತೀರಿ?' ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.

‘ಸಿಎಂ ಬಿಎಸ್‍ವೈ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಾಗಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ಸರಕಾರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ ಕ್ರಮ ಕೈಗೊಳ್ಳದ ಸಿಎಂ ಬಿಎಸ್‍ವೈ ನಡೆ ಆರೋಪವನ್ನು ಒಪ್ಪಿಕೊಂಡಂತೆಯೇ ತಾನೆ?' ಎಂದು ಶಿವಕುಮಾರ್ ಕೇಳಿದ್ದಾರೆ.

‘ಆರೋಪಿ ಸರಕಾರವನ್ನು ಬೆದರಿಸಿದ, ಸರಕಾರ ಅಧಿಕಾರಿಗಳನ್ನು ಬೆದರಿಸಿತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ತನಿಖೆ ಆರಂಭದಲ್ಲಿಯೇ ಆರೋಪಿ ಸಾಕ್ಷ್ಯ ನಾಶಕ್ಕೆ ಕೈ ಹಾಕಿದರೆ ಎಂದು ಮಾಡುತ್ತೀರಿ? ಆರೋಪಿ ಸಾಕ್ಷ್ಯಗಳಿಗೆ, ಸಂತ್ರಸ್ತೆಗೆ ಬೆದರಿಕೆ ಹಾಕಿದರೆ ಏನು ಮಾಡುತ್ತೀರಿ? ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರೇ?'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News