ಮಧು ಬಂಗಾರಪ್ಪ ಜೊತೆ ಕಾಂಗ್ರೆಸ್ ಸೇರಲು ಶಿವಮೊಗ್ಗ ಜೆಡಿಎಸ್ ಮುಖಂಡರ ನಿರ್ಧಾರ

Update: 2021-04-02 17:14 GMT

ಶಿವಮೊಗ್ಗ, ಎ.2: ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದರಿಂದ ಅವರನ್ನು ಬೆಂಬಲಿಸಿ ಶಿವಮೊಗ್ಗ ನಗರ ಹಾಗೂ ಕುಂಸಿ ಭಾಗದ ಜೆಡಿಎಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್  ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಬಂಗಾರಪ್ಪನವರು ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡಾಗ ಅವರನ್ನು ಬೆಂಬಲಿಸಿ ನಾವು ಸಹ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದೆವು. ಈಗ ಮಧು ಬಂಗಾರಪ್ಪನವರನ್ನು ಬೆಂಬಲಿಸುತ್ತಿದ್ದೇವೆ ಎಂದ ಅವರು, ಇಂದೇ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದಿನಿಂದಲೆ ನಾವು ಕಾಂಗ್ರೆಸ್ಸಿಗರು ಎಂದರು.

ಸಮಾಜವಾದಿ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಜ್ಯಾತ್ಯಾತೀತ ಪಕ್ಷಗಳು ಜಯಭೇರಿ ಭಾರಿಸುತ್ತಿದ್ದವು. ಆದರೆ ಇಂದು ಬಿಜೆಪಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದರಿಂದಾಗಿ ಜ್ಯಾತ್ಯತೀತ ಪಕ್ಷಗಳಿಗೆ ಹಿನ್ನಡೆಯಾಗಿರುವುದರಿಂದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗೆ ಬಲತುಂಬಲು ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಿದ್ದು, ಇವರನ್ನು ಬೆಂಬಲಿಸಿ ಜಿಲ್ಲೆಯ ಬಹುತೇಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದೇವೆ ಎಂದರು.

ಕೊರೋನ ಹಿನ್ನಲೆಯಲ್ಲಿ ದೊಡ್ಡಮಟ್ಟದ ಸಮಾವೇಶ ನಡೆಸಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಬೇಕಿತ್ತು. ಆದರೆ ಈ ಸಮಾವೇಶವನ್ನು ಮುಂದೂಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಮಧು ಬಂಗಾರಪ್ಪನವರನ್ನು ಬೆಂಬಲಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದ ಅವರು ತಮ್ಮ 30 ವರ್ಷದ ಜೆಡಿಎಸ್ ಒಡನಾಟವನ್ನು ಇಂದು ಕಳೆದುಕೊಂಡಿದ್ದೇವೆ. ಇಲ್ಲಿಯವರೆಗೆ ಸಹಕಾರ ನೀಡಿದ ಜೆಡಿಎಸ್ ಮುಖಂಡರುಗಳಿಗೆ ಕೃತಜ್ಞತೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಝ, ಬಿ.ತೇಜಪ್ಪ, ನಾಗರಾಜ್, ಕೃಷ್ಣಮೂರ್ತಿ, ರಾಜಶೇಖರ್, ನಾಗೇಗೌಡ, ಉದಯ್ ಕುಮಾರ್, ಸದಾಶಿವ, ಮಮತಾ, ಸುದರ್ಶನ್, ರಾಮಣ್ಣ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News