ಅಶ್ಲೀಲ ಸೀಡಿ ಪ್ರಕರಣ: ಸಂತ್ರಸ್ತ ಯುವತಿ ಪರ ವಕೀಲ ಮಂಜುನಾಥ್ ಸನ್ನದು ಅಮಾನತು

Update: 2021-04-03 16:26 GMT
ವಕೀಲ ಮಂಜುನಾಥ್ (Photo source: Facebook)

ಬೆಂಗಳೂರು, ಎ.3: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ(ಕೆಎಸ್‌ಬಿಸಿ) ಸ್ಟಾಂಪ್ ಫೀ ಕಲೆಕ್ಷನ್ ಕುರಿತು ಭ್ರಷ್ಟಾಚಾರ ಆರೋಪ ಮಾಡಿದ ಹಿನ್ನೆಲೆ ಸಿಡಿ ಸಂತ್ರಸ್ತೆ ಪರ ವಕೀಲ ಮಂಜುನಾಥ್ ಅವರ ಸನ್ನದನ್ನು ಅಮಾನತು ಮಾಡಿ ಪರಿಷತ್ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

ಆದೇಶ ಹಿನ್ನೆಲೆ ವಿಚಾರಣೆ ಮುಗಿಯುವವರೆಗೂ ವಕೀಲ ವೃತ್ತಿ ಮಾಡದಂತೆ ಸೂಚಿಸಲಾಗಿದೆ. ಜತೆಗೆ, ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆಯೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಶನಿವಾರ ಈ ಕುರಿತು ಮಾಹಿತಿ ನೀಡಿದ ಕೆಎಸ್‌ಬಿಸಿ ಅಧ್ಯಕ್ಷ ಶ್ರೀನಿವಾಸ್‌ಬಾಬು, ಪರಿಷತ್ತಿನ ಬಗ್ಗೆ ಮಂಜುನಾಥ್ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪರಿಷತ್ ಸರ್ವ ಸದಸ್ಯರ ಸಭೆ ನಡೆಸಿ ಅವರ ಸನ್ನದನ್ನು ಅಮಾನತು ಮಾಡಿ ನಿರ್ಣಯ ಕೈಗೊಂಡಿದೆ. ಹಾಗೆಯೇ ಅವರ ಹೇಳಿಕೆಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ವಕೀಲರ ಪರಿಷತ್ತಿನಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲ. ವಕಾಲತ್ತು ಅರ್ಜಿಗಳಿಗೆ ಲಗತ್ತಿಸುವ ವೆಲ್‌ಫೇರ್ ಸ್ಟ್ಯಾಂಪ್‌ಗಳ ನಿರ್ವಹಣೆಯನ್ನು ಪರಿಷತ್ತು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ. ಜತೆಗೆ ಪರಿಷತ್ತಿನ ಆದಾಯ, ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷದ ಆಡಿಟ್ ವರದಿ ನಮ್ಮಲ್ಲಿದೆ. ಅವರಿಗೆ ಅಗತ್ಯವಿದ್ದರೆ ಬಂದು ಪಡೆದು, ಮಾಹಿತಿ ಇಟ್ಟುಕೊಳ್ಳಲಿ ಎಂದು ಹೇಳಿದರು.

‘ಜಗದೀಶ್ ವಿರುದ್ಧವೂ ಕ್ರಮ’
ಸಿಡಿ ಪ್ರಕರಣದ ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಅವರ ಸದಸ್ಯತ್ವ ಮಾಹಿತಿ ಹಾಗೂ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಹೊಸದಿಲ್ಲಿಯ ವಕೀಲರ ಪರಿಷತ್ತಿಗೆ ಪತ್ರ ಬರೆದಿದ್ದೇವೆ.
-ಶ್ರೀನಿವಾಸ್‍ಬಾಬು, ಅಧ್ಯಕ್ಷ, ಕೆಎಸ್‍ಬಿಸಿ

ಮಂಜುನಾಥ್ ಆರೋಪವೇನು?
ಸಿಡಿ ಪ್ರಕರಣದ ಯುವತಿ ಪರ ವಕೀಲರಾದ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿಲ್ಲ ಎಂಬ ಮಾಹಿತಿ ಶುಕ್ರವಾರ ಬಹಿರಂಗವಾಗಿತ್ತು. ಈ ಹಿನ್ನೆಲೆ ಜಗದೀಶ್ ಹಾಗೂ ಮಂಜುನಾಥ್ ಫೇಸ್‍ಬುಕ್ ಲೈವ್‍ನಲ್ಲಿ ರಾಜ್ಯ ವಕೀಲರ ಪರಿಷತ್ತಿನ ಬಗ್ಗೆ ಆರೋಪಗಳನ್ನು ಮಾಡಿ, ಪರಿಷತ್ ಅವ್ಯವಹಾರಗಳನ್ನು ಬಯಲಿಗೆಳೆಯುವುದಾಗಿ ಸವಾಲು ಹಾಕಿದ್ದರು. ಇದೇ ವೇಳೆ ಮಂಜುನಾಥ್ ಅವರು ರಾಜ್ಯ ವಕೀಲರ ಪರಿಷತ್ತಿನಲ್ಲಿ ನಕಲಿ ಸ್ಟ್ಯಾಂಪ್ ಜಾಲವಿದ್ದು, ತೆಲಗಿ ಪ್ರಕರಣವನ್ನೂ ಮೀರಿಸುತ್ತದೆ. ವಕೀಲರ ಕಲ್ಯಾಣ ನಿಧಿ ದುರ್ಬಳಕೆ ಆಗುತ್ತಿದೆ. ಪರಿಷತ್ ಆದಾಯಕ್ಕೆ ಲೆಕ್ಕವೇ ಇಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News