ಕೋವಿಡ್ ನಿಯಂತ್ರಣಕ್ಕೆ ಲಸಿಕೆ-ಪರೀಕ್ಷಾ ಸಂಖ್ಯೆ ಹೆಚ್ಚಳ ಅನಿವಾರ್ಯ: ಆರ್.ವಿ.ದೇಶಪಾಂಡೆ

Update: 2021-04-03 17:45 GMT

ಬೆಂಗಳೂರು, ಎ.3: ಕಳೆದ ವರ್ಷ ಇಡೀ ದೇಶವೆ ಕೊರೋನ ಮಹಾಮಾರಿಗೆ ಸಿಲುಕಿ ನಲುಗಿ ಹೋಗಿದ್ದು, ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಸ್ತುತ ವರ್ಷ ಕೊರೋನ ಮಹಾಮಾರಿಯ ಎರಡನೆಯ ಅಲೆಯ ಆರ್ಭಟವು ಶುರುವಾಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೊರೋನ ಎರಡನೇ ಅಲೆಯು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು, ಪ್ರತಿನಿತ್ಯ ಸುಮಾರು 4000ಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಸಹಜವಾಗಿಯೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಪತ್ರ ಬರೆದಿರುವ ಅವರು, ದೇಶದ ಪ್ರತಿನಿತ್ಯ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯವು ಮೂರನೆಯ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೆ ರಾಜ್ಯ ಸರಕಾರವು ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಈ ಕ್ರಮಗಳಿಂದಾಗಿ ಕೊರೋನ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ. ಇನ್ನು ಹೆಚ್ಚಿನ ಬಿಗಿ ನಿಯಮ ಜಾರಿಗೊಳಿಸುವುದರ ಜೊತೆಗೆ ಕೋವಿಡ್ ಲಸಿಕೆ ನೀಡುವುದು ಮತ್ತು ಪರೀಕ್ಷಾ ಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಸ್ ಮಾಡಿಕೊಳ್ಳುವುದರಲ್ಲಿ ಆಸಕ್ತಿ ತೋರದಿರುವುದು ಕೊರೋನ ಎರಡನೆ ಅಲೆ ವೇಗವಾಗಿ ಹರಡಲು ಕಾರಣವೆಂದು ನಂಬಿದ್ದೇನೆ. ನಿರ್ಲಕ್ಷ್ಯ ಮಾಡಿದರೆ ಕಂಟಕ ತಪ್ಪಿದ್ದಲ್ಲ ಎಂಬ ಅರಿವನ್ನು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.

ಕಳೆದ ವರ್ಷ ಕೊರೋನ ಪ್ರಾರಂಭದಲ್ಲಿ ವಿವಿಧ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿದ್ದವು. ಆದರೆ, ಈಗ ಈ ಇಲಾಖೆಗಳು ನಿಷ್ಕ್ರಿಯಗೊಂಡಿದ್ದು ಎದ್ದು ಕಾಣುತ್ತಿದ್ದು, ಸರಕಾರವು ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರು ಮತ್ತು ಇಲಾಖೆಗಳು ಕಡ್ಡಾಯವಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಬಿಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ ಎಂದು ಅವರು ಕೋರಿದ್ದಾರೆ.

ಆದುದರಿಂದ, ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ಕೊರೋನ ಎರಡನೆ ಅಲೆಯನ್ನು ಹರಡುವುದನ್ನು ತಡೆಯಲು ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿಕೊಂಡಿರುವ ದೇಶಪಾಂಡೆ, ಈ ನಿಟ್ಟಿನಲ್ಲಿ ಸರಕಾರಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿರುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News