×
Ad

ಸಿದ್ದರಾಮಯ್ಯನವರೇ ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೆ ಹೊರತು ಕೀಳುಮಟ್ಟದಲ್ಲಿ ಅಲ್ಲ: ಸಚಿವ ಬಿ.ಸಿ.ಪಾಟೀಲ್

Update: 2021-04-03 23:21 IST

ಬೆಂಗಳೂರು, ಎ.3: ಯಾರೂ ಯಾರಪ್ಪನ ಮನೆಯಿಂದ ಕೊಡುವುದಿಲ್ಲ, ಎಲ್ಲರೂ ಸರಕಾರದಿಂದಲೇ ಕೊಡುವುದು ಎಂಬುದು ಸಿದ್ದರಾಮಯ್ಯನವರ ಗಮನದಲ್ಲಿರಲಿ. ಸಿದ್ದರಾಮಯ್ಯನವರೇ ನಿಮ್ಮ ಟೀಕೆಗಳು ಕ್ರಿಯಾತ್ಮಕವಾಗಿರಬೇಕೆ ಹೊರತು ಕೀಳುಮಟ್ಟದಲ್ಲಿ ಅಲ್ಲ. ಕೀಳುಮಟ್ಟದ ಭಾಷೆಯನ್ನು ಬಳಸುವುದರಿಂದ ಜನಾನುರಾಗಿ ಆಗುತ್ತೇನೆಂದು ನೀವು ಭಾವಿಸಿದ್ದರೆ ಅದು ತಪ್ಪು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್, ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮ್ಮ ಕಾಲದಲ್ಲಿ ಕೊಡುತ್ತಿದ್ದಂತೆಯೇ ಈಗಲೂ ಪಡಿತರ ವ್ಯವಸ್ಥೆ ಅದೇ ಮುಂದುವರಿದಿದೆ. ಆದರೆ, 2ಕೆಜಿ ಅಕ್ಕಿ ಮಾತ್ರ ಕಡಿಮೆಯಾಗಿದೆ. ಕೋವಿಡ್ ಮತ್ತು ನೆರೆ ಪ್ರವಾಹ ಪರಿಸ್ಥಿತಿಯಲ್ಲಿಯೂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನಾವು ಕೇಂದ್ರ ಮತ್ತು ರಾಜ್ಯ ಸರಕಾರದಿಂದ 10 ಸಾವಿರ ರೂ.ಕೊಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಕೋವಿಡ್ ಸಂಕಷ್ಟದ ಸಮಯದಲ್ಲಿ 10ಲಕ್ಷ ರೈತರಿಗೆ ಪ್ರತಿಯೊಬ್ಬರಿಗೆ 5ಸಾವಿರ ರೂ.ನಂತೆ ಮೆಕ್ಕೆಜೋಳಕ್ಕೆ ಪರಿಹಾರ ನೀಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಈ ರೀತಿ ಕೀಳುಮಟ್ಟದ ಪ್ರಚಾರವನ್ನು ನಿಲ್ಲಿಸುವುದು ಒಳ್ಳೆಯದು ಎಂದು ಸಲಹೆ ಮಾಡಿದ್ದಾರೆ.

ಜನರಿಗೆ ಅಕ್ಕಿ ಕೊಡುತ್ತಿದ್ದೆವು ಎಂದು ಹೇಳುವ ಸಿದ್ದರಾಮಯ್ಯನವರು ಈ ಅಕ್ಕಿಯನ್ನು ಯಾರೂ ಯಾರಪ್ಪನ ಮನೆಯಿಂದ ಕೊಡುವುದಿಲ್ಲ ಎಂಬುದನ್ನು ತಿಳಿಯಬೇಕು. ಕೀಳುಮಟ್ಟದ ಮಾತು, ಭಾಷೆ ಪ್ರಯೋಗದಿಂದ ಸರಕಾರವನ್ನು ಟೀಕಿಸಿದ್ದ ಮಾತ್ರಕ್ಕೆ ಸಿದ್ದರಾಮಯ್ಯ ಜನಾನುರಾಗಿಗಳಾಗುತ್ತಾರೆಂದು ಒಂದು ವೇಳೆ ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ ಹಾಗೂ ಮೂರ್ಖತನವಾಗುತ್ತದೆ.
ಬಿಜೆಪಿ ಸರಕಾರ ಬಿಪಿಎಲ್ ಕಾರ್ಡುದಾರ ಪ್ರತಿಯೊಬ್ಬರಿಗೆ 5 ಕೆ.ಜಿ ಅಕ್ಕಿ 1 ಕಾರ್ಡಿಗೆ 2 ಕೆ.ಜಿ. ಗೋಧಿ ನೀಡುತ್ತದೆ. ಅಂತ್ಯೋದಯ ಕಾರ್ಡಿಗೆ 35 ಕೆ.ಜಿ ಅಕ್ಕಿಯನ್ನು ಈ ಮೊದಲಿನಂತೆಯೇ ನೀಡುತ್ತಿದ್ದೆ. ಕೇವಲ ಪ್ರಚಾರಕ್ಕಾಗಿಯೋ ಅಥವಾ ಕ್ರಿಯಾಶೀಲರಾಗಿದ್ದೇವೆಂದು ತೋರಿಸಿಕೊಳ್ಳಲೋ ಅಥವಾ ಸರಕಾರವನ್ನು ಉದ್ದೇಶಪೂರ್ವಕವಾಗಿ ಟೀಕಿಸಲೇಬೇಕಂತಲೋ ಟೀಕಿಸಬಾರದು. ಸಿಎಂ ವಿರುದ್ಧ ಕೀಳುಮಟ್ಟದ ಭಾಷೆ ಬಳಸುವುದನ್ನು ಬಿಡಬೇಕು ಎಂದು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News