ಉಪ ಚುನಾವಣೆ ಸೋಲಿನ ಹತಾಶೆಯಿಂದ ಸಿಎಂ ವಿರುದ್ಧ ಸಿದ್ದರಾಮಯ್ಯ ಆರೋಪ: ಎಸ್.ಟಿ.ಸೋಮಶೇಖರ್
ಬೆಂಗಳೂರು, ಎ.3: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಷ್ಟು ಉತ್ತಮ ಆಡಳಿತ ಕೊಟ್ಟಿದ್ದರೆ ಮತ್ತೆ ಅಧಿಕಾರಕ್ಕೆ ಏರಬೇಕಿತ್ತು. ಯಾಕೆ ಜನ ಅವರನ್ನು ತಿರಸ್ಕರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರಕ್ಕೆ ಏಕೆ ಬಹುಮತವನ್ನು ಕೊಟ್ಟರು? ಮಾಜಿ ಮುಖ್ಯಮಂತ್ರಿಯಾದವರು ಇಷ್ಟನ್ನು ಅರ್ಥ ಮಾಡಿಕೊಂಡರೆ ಸಾಕಿತ್ತು. ಆದರೆ, ನಮ್ಮ ಸರಕಾರದ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸಾಧನೆ ನೋಡಿ ಸಹಿಸಲಾಗದೇ, ಏನೂ ಕಾರಣ ಸಿಗದೆ ವೃಥಾ ಆರೋಪವನ್ನು ಮಾಡುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ನಮ್ಮ ರಾಜ್ಯದ ಜನತೆ ಸಿದ್ದರಾಮಯ್ಯ ಹೇಳಿದಂತೆ ದಡ್ಡರಲ್ಲ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಗುಣವಿದೆ. ದುಡ್ಡು ಕೊಟ್ಟು ಎಲ್ಲವನ್ನೂ ಕೊಂಡುಕೊಳ್ಳುವುದಾಗಿದ್ದರೆ, ಕಾಂಗ್ರೆಸ್ ಒಂದಾದರೂ ಸೀಟು ಗೆಲ್ಲುತ್ತಿತ್ತಾ? ಹೋಗಲಿ ಸಿದ್ದರಾಮಯ್ಯ ಅವರಾದರೂ ಗೆಲ್ಲುತ್ತಿದ್ದರಾ? ಇಲ್ಲಿ ಸಿದ್ದರಾಮಯ್ಯ ಅವರಿಗೆ ಈ ಬಾರಿಯ ಉಪ ಚುನಾವಣೆಗಳಲ್ಲಿ ಸೋಲಿನ ಭೀತಿ ಕಾಣಿಸಿಕೊಂಡಿದೆ. ಸೋಲು ನಿಶ್ಚಿತವಾಗುತ್ತಿದ್ದಂತೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೊರೋನ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಂಡ ಜನಪರ ಯೋಜನೆ, ಕ್ರಮಗಳು ಜನ ಮೆಚ್ಚುಗೆ ಪಡೆದಿದೆ. ಕೊರೋನ ವಾರಿಯರ್ಸ್‍ಗಳಾದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹಧನ, ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ, ಸ್ಲಂ ನಿವಾಸಿಗಳು, ಬಡವರಿಗೆ ಕೆಎಂಎಫ್‍ನಿಂದ ಉಚಿತ ಹಾಲು ವಿತರಣೆ, ಪ್ರವಾಹ ಪರಿಸ್ಥಿತಿಯಲ್ಲಿ ಮನೆ ಕಳೆದುಕೊಂಡವರಿಗೆ ತಲಾ 5 ಲಕ್ಷ ರೂಪಾಯಿ ಘೋಷಿಸಿದ ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಿದ್ದಾರೆ. ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಮಾಡುತ್ತಿದೆ ಎಂದು ಸೋಮಶೇಖರ್ ಹೇಳಿದ್ದಾರೆ.
ಯಡಿಯೂರಪ್ಪ ಕೈ ಬಲಪಡಿಸಿ ಉತ್ತಮ ಆಡಳಿತ ನೀಡಲು ನಾವು 17 ಮಂದಿ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ನಿಂತಾಗ ರಾಜ್ಯದ ಜನತೆ ನಮಗೆ ಮತ ಹಾಕಿ ಗೆಲ್ಲಿಸಿದ್ದು ಯಾಕೆ ಎಂದು ಕಾಂಗ್ರೆಸ್‍ನವರು ಮರೆತಂದಿದೆ. ಅಲ್ಲದೆ, ಇತ್ತೀಚೆಗೆ ನಡೆದ ರಾಜರಾಜೇಶ್ವರಿ ಹಾಗೂ ಶಿರಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಅಭೂತಪೂರ್ವವಾಗಿ ಜನ ಗೆಲ್ಲಿಸಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈಗಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಕಡೆ ಸೋಲುಂಡಿದ್ದರಿಂದ ಈ ಉಪ ಚುನಾವಣೆಗಳಲ್ಲೂ ಸೋಲುವ ಭೀತಿ ಎದುರಾಗಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಟೀಕಿಸಿದ್ದಾರೆ.
ಮುಖ್ಯಮಂತ್ರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರ ಬೆಳವಣಿಗೆ ವೇಗವನ್ನು ಸಿದ್ದರಾಮಯ್ಯ ಅವರಿಗೆ ಸಹಿಸಲಾಗುತ್ತಿಲ್ಲ. ವರುಣಾದಲ್ಲಿಯೆ ಅವರ ಮುಂದಿನ ಸ್ಪರ್ಧೆ ಎಂಬ ಹೇಳಿಕೆ ಇತ್ತೀಚೆಗೆ ಹೊರ ಬಿದ್ದ ಹಿನ್ನೆಲೆಯಲ್ಲಿ ಗಾಬರಿಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಎಲ್ಲ ಕಡೆ ಅವರ ಪಕ್ಷ ಸಂಘಟನೆ, ಚುನಾವಣಾ ಕಾರ್ಯತಂತ್ರ ಹೆಣೆಯುವಿಕೆಯಿಂದ ಬಿಜೆಪಿ ಜಯಗಳಿಸುತ್ತಾ ಬಂದಿದೆ. ಈ ಉಪ ಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ವಿಜಯೇಂದ್ರ ಅವರು ದುಡ್ಡುಕೊಟ್ಟು ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಹಾಗಾದರೆ ದುಡ್ಡು ಕೊಟ್ಟು ಗೆಲ್ಲುವುದಾದರೆ ಚುನಾವಣೆಗಳು ಏಕೆ ಎಂದು ನಾನು ಪ್ರಶ್ನಿಸುತ್ತೇನೆ. ಅದಲ್ಲದೆ, ದುಡ್ಡಿನಿಂದಲೇ ಕೊಂಡುಕೊಳ್ಳುವುದಾಗಿದ್ದರೆ ಇಡೀ 224 ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಆಯ್ಕೆ ಆಗಬೇಕಿತ್ತಲ್ಲವೇ? ಇದು ನಮ್ಮ ಮಾಜಿ ಮುಖ್ಯಮಂತ್ರಿಯವರಿಗೆ ಅರಿವಿಲ್ಲವೇ? ಅಥವಾ ಸತತ ಸೋಲುಗಳ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆಯೇ? ಎಂದು ಸೋಮಶೇಖರ್ ಪ್ರಶ್ನಿಸಿದ್ದಾರೆ.
ಮೊದಲು ತಮ್ಮ ಪಕ್ಷದೊಳಗಿನ ಗೊಂದಲವನ್ನು ಬಗೆಹರಿಸಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಒಬ್ಬರ ಕಾಲನ್ನು ಒಬ್ಬರು ಎಳೆದುಕೊಳ್ಳುತ್ತಾ, ಕಿತ್ತಾಡುತ್ತಿದ್ದಾರೆ. ಸುಮ್ಮನೆ ಆ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ಮೊದಲು ತಮ್ಮ ಕುರ್ಚಿಗಳನ್ನು ಭದ್ರ ಮಾಡಿಕೊಳ್ಳಲಿ, ಆ ನಂತರ ಉಳಿದ ವಿಷಯಗಳ ಬಗ್ಗೆ ಗಮನಹರಿಸಲಿ ಎಂದು ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.