×
Ad

ಮಾಸ್ಕ್ ಧರಿಸದೇ ಓಡಾಡುವವರಿಗೆ 100 ರೂ. ದಂಢ: ಚಿಕ್ಕಮಗಳೂರು ಜಿಲ್ಲಾಧಿಕಾರಿ

Update: 2021-04-03 23:43 IST

ಚಿಕ್ಕಮಗಳೂರು, ಎ.3: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಒಡಾಡುವರಿಗೆ 100 ರೂ. ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಶನಿವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಟ್ಟಡದಲ್ಲಿರುವ ಕೋವಿಡ್ ವಾರ್ ರೂಮ್‍ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಎರಡನೆ ಅಲೆಯಿಂದಾಗಿ ಕಳೆದೊಂದು ವಾರದಿಂದ ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರ ವಿರುದ್ಧ ನಿರ್ಧಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಮಾಸ್ಕ್ ಧರಿಸದವರಿಗೆ ಸ್ಥಳದಲ್ಲೇ 100 ರೂ. ದಂಢ ವಿಧಿಸಲಾಗುವುದು ಎಂದು ಎಚ್ಚರಿಸಿದ ಜಿಲ್ಲಾಧಿಕಾರಿ. ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಸಂಬಂಧ ತಹಶೀಲ್ದಾರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಜನಸಂಖ್ಯೆ ಆಧಾರದ ಮೇಲೆ 2ರಿಂದ 3 ತಂಡಗಳು ಸಾರ್ವಜನಿಕರ ಮಧ್ಯೆ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡದಲ್ಲಿರುವ ಸಿಬ್ಬಂದಿ ಸಾರ್ವಜನಿಕರಲ್ಲಿ ಕೊರೋನ ಸೋಂಕಿನ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಇದನ್ನು ಮೀರಿ ಸಾರ್ವಜನಿಕರು ಮಾಸ್ಕ್ ಧರಿಸದಿದಲ್ಲಿ ದಂಢ ವಿಧಿಸಲಿದ್ದಾರೆ ಎಂದರು.

ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ತಂಡ ರಚಿಸಲಾಗುವುದು ಎಂದ ಅವರು, ನಗರಸಭೆಯಿಂದ ಈ ಹಿಂದೆ ರಚಿಸಲಾದ ತಂಡವನ್ನು ಮತ್ತೆ ರಚಿಸುವಂತೆ ಸೂಚಿಸಲಾಗಿದೆ. ಕೋವಿಡ್ ಪರಿಸ್ಥಿತಿಯನ್ನು ಅರಿಯುವ ದೃಷ್ಟಿಯಿಂದ ಕೋವಿಡ್ ವಾರ್ ರೂಮ್‍ಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದೇನೆ. ವಾರ್ ರೂಮ್ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಣೆಯನ್ನು ತೋರುತ್ತಿದ್ದಾರೆ ಎಂದರು. 

ತುರ್ತು ಆವಶ್ಯಕತೆ ಇರುವರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಮೊದಲ ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿರುವ ಸೋಂಕಿತರ ಸಂಪರ್ಕಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು, ಅವರ ಸಂಪರ್ಕಕ್ಕೆ ಬಂದವರ ಟ್ರೇಸಿಂಗ್ ಕಾರ್ಯವನ್ನು ನಡೆಸಲಾಗುತ್ತಿದೆ. ಸರಕಾರದ ನಿರ್ದೇಶನದಂತೆ ಟ್ರೇಸಿಂಗ್, ಟ್ರಾಕಿಂಗ್, ಟ್ರೀಟ್‍ಮೆಂಟ್ ಮಾರ್ಗಸೂಚಿಯನ್ನು ಕ್ರಮಬದ್ಧವಾಗಿ ಅನುಸರಿಸಲಾಗುತ್ತಿದೆ ಎಂದರು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಮತ್ತು ಸರಕಾರ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಸರಕಾರಿ ಇಲಾಖೆಗಳ ನೌಕರರು ಕಡ್ಡಾಯವಾಗಿ ಮಾಸ್ಕ್‍ಧರಿ ಸುವಂತೆ ಸೂಚನೆ ನೀಡಲಾಗಿದೆ ಎಂದ ಜಿಲ್ಲಾಧಿಕಾರಿ ನಗರದ ಪ್ರವಾಸಿತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ತಪಾಸಣೆಯನ್ನು ಕಟ್ಟುನಿಟ್ಟಿನಿಂದ ಮಾಡಲಾಗುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಲಾವುದು ಎಂದರು.

ನಗರದ ಬಸವನಹಳ್ಳಿ ಪ್ರೌಢಶಾಲೆಯಲ್ಲಿ 26 ವಿದ್ಯಾರ್ಥಿನಿಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡುವಂತೆ ಸಂಬಂಧಿಸಿದವರಿಗೆ ತಿಳಿಸಲಾಗಿದೆ. ಬಸವನಹಳ್ಳಿ ಪ್ರೌಢಶಾಲೆ ಹಾಗೂ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನೂ ಸೋಂಕು ಪತ್ತೆ ಪರೀಕ್ಷೆಗೊಳಪಡಿಸಲಾಗುತ್ತಿದೆ. 
- ಕೆ.ಎನ್.ರಮೇಶ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News