×
Ad

ಶಾಸಕರು, ಸಾರ್ವಜನಿಕರ ಸಮಸ್ಯೆಗೆ ಸಚಿವರು ಸ್ಪಂದಿಸದಿದ್ದಾಗ ಸಿಎಂ ಮಧ್ಯಪ್ರವೇಶ ಸಹಜ: ಸಚಿವ ಸೋಮಶೇಖರ್

Update: 2021-04-05 12:56 IST

ಮೈಸೂರು, ಎ.5: ಶಾಸಕರುಗಳಿಗೆ ಮತ್ತು ಸಾರ್ವಜನಿಕರಿಗೆ ಸಚಿವರುಗಳು ಸರಿಯಾಗಿ ಸ್ಪಂದಿಸದಿದ್ದಾಗ ಮುಖ್ಯಮಂತ್ರಿ  ಮಧ್ಯಪ್ರವೇಶಿಸುವುದು ಸಹಜ. ಗ್ರಾಮೀಣಾಭಿವೃದ್ಧಿ ಇಲಾಖೆ ವಿಚಾರದಲ್ಲೂ ಇದೇ ಆಗಿರಬಹುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆ ವಿಚಾರದಲ್ಲಿ ಮುಖ್ಯಮಂತ್ರಿಯ ಮಧ್ಯಪ್ರವೇಶದ ಕುರಿತು ಸಚಿವ ಕೆ.ಎಸ್.ಈಶ್ವರಪ್ಪರ ಅಸಮಾಧಾನದ ಬಗ್ಗೆ ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯಿಸಿದರು.

ತಾನು ಸಹಕಾರ ಸಚಿವನಾಗಿ ಒಂದು ವರ್ಷ ಆಯಿತು. ಈ ವರೆಗೂ ಮುಖ್ಯಮಂತ್ರಿಯಾಗಲಿ ಅವರ ಪುತ್ರರಾಗಲಿ ತನ್ನ ಇಲಾಖೆಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಿಲ್ಲ, ಯಾರು ಸಾರ್ವಜನಿಕರಿಗೆ ಸ್ಪಂದಿಸುವುದಿಲ್ಲವೊ ಅಂತಹ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಗೆ ದೂರನ್ನು ನೀಡುತ್ತಾರೆ. ಆಗ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕಾಗುತ್ತದೆ. ಇದು ಮುಖ್ಯಮಂತ್ರಿಯ ಪರಮಾಧಿಕಾರ ಎಂದು ಸಮರ್ಥಿಸಿಕೊಂಡರು.

ಹಾಗಿದ್ದರೆ ಈಶ್ವರಪ್ಪ ಶಾಸಕರುಗಳ ಮಾತನ್ನು ಕೇಳುತ್ತಿರಲಿಲ್ಲವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನೀವೆ ಅರ್ಥ ಮಾಡಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಬ್ಬರ್ ಸ್ಟಾಂಪ್ ಎಂದು ಆರೋಪಿಸಿದ್ದ ಶಾಸಕ ಎಚ್.ಪಿ.ಮಂಜುನಾಥ್ ವಿರುದ್ಧ ಹರಿಹಾಯ್ದ ಸಚಿವ ಎಸ್.ಟಿ.ಸೋಮಶೇಖರ್, ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಬೇಕಾದರೆ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು ಸುಮಾರು 40 ವರ್ಷ ರಾಜಕಾರಣದಲ್ಲಿ ಎಲ್ಲಾ ರೀತಿಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ, ಇವರು ಬರೀ ಶಾಸಕರಾಗಿರುವುದು ಬಿಟ್ಟರೆ ಬೇರೆ ಏನಾಗಿದ್ದಾರೆ ಎಂದು ಪ್ರಶ್ನಿಸಿದರು.

ಮೈಸೂರು ಹಾಲು ಒಕ್ಕೂದ ನೇಮಕಾತಿಯಲ್ಲಿ ಯಡಿಯೂರಪ್ಪ ತಂಗಿ ಮಗ ಅಶೋಕ್ ಪಾತ್ರ ಇದ್ದು ಉಸ್ತುವಾರಿ ಸಚಿವರು ಡಮ್ಮಿ ಎಂಬ ಶಾಸಕ ಎಚ್.ಪಿ.ಮಂಜುನಾಥ್ ಆರೋಪಕ್ಕೆ ಗರಂ ಆದ ಸಚಿವರು, ನನ್ನ ಸಮಾನರಾದವರಿಗೆ(ಕ್ಯಾಬಿನೆಟ್ ಸಚಿವರಾಗಿದ್ದವರಿಗೆ) ಉತ್ತರ ನೀಡುತ್ತೇನೆಯೇ ಹೊರತು ಯಾರ್ಯಾರದೊ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ, ಅಭಿವೃದ್ಧಿ ವಿಚಾರದಲ್ಲಿ ನನಗೆ ದೂರವಾಣಿ ಮಾಡುವ ಅವರು ನನ್ನ ವಿರುದ್ಧವೇ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News