×
Ad

ಶಿವಮೊಗ್ಗ ಮಹಾನಗರ ಪಾಲಿಕೆಯ ಮಾದರಿ ಆಶ್ರಯ ಮನೆ ವೀಕ್ಷಣೆ ಕಾರ್ಯಕ್ರಮದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ!

Update: 2021-04-05 13:51 IST

ಶಿವಮೊಗ್ಗ, ಎ.5: ಮಹಾನಗರ ಪಾಲಿಕೆ ಆಶ್ರಯ ಸಮಿತಿಯ ವತಿಯಿಂದ ನಿರ್ಮಿಸಿಕೊಡಲಾಗುವ ಮಾದರಿ ಮನೆ ವೀಕ್ಷಣೆ ಕಾರ್ಯಕ್ರಮ ನಗರದ ಹೊರವಲಯದ ಗೋವಿಂದಾಪುರದಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದು, ಇದರಲ್ಲಿ ಸಾವಿರಾರು ಮಂದಿ ಭಾಗವಹಿಸುವ ಮೂಲಕ ಕೋವಿಡ್ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಮಾರ್ಗಸೂಚಿಯಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ, ಧರಣಿ ನಡೆಸದಂತೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಸಭೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿಯೂ ಹೇಳಿಕೆ ನೀಡಿದ್ದರು. ಆದರೆ ಮಾದರಿ ಆಶ್ರಯ ಮನೆ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾರ್ಗಸೂಚಿ‌ಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಮಹಾನಗರ ಪಾಲಿಕೆ ಆಶ್ರಯ ಸಮಿತಿಯ ವತಿಯಿಂದ ನಗರದ ಹೊರವಲಯದ ಗೋವಿಂದಾಪುರದಲ್ಲಿ ಮಾದರಿ ಆಶ್ರಯ ಮನೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಆಶ್ರಯ ಮನೆ ನಿರ್ಮಾಣಗೊಂಡಿಲ್ಲ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ಆಡಳಿತವಿರುವ ಮಹಾನಗರ ಪಾಲಿಕೆಯು ಸಾವಿರಾರು ಆಶ್ರಯ ಫಲಾನುಭವಿಗಳನ್ನು ಸೇರಿಸಿ ಸೋಮವಾರ ಗೋವಿಂದಾಪುರದಲ್ಲಿ ಮಾದರಿ ಮನೆ ವೀಕ್ಷಣೆ ಕಾರ್ಯಕ್ರಮ ಆಯೋಜಿಸಿತ್ತು. ಇದರಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಆದರೆ ಹೆಚ್ಚಿನವರು ಮಾಸ್ಕ್ ಧರಿಸಿಲ್ಲ, ಸುರಕ್ಷಿತ ಅಂತರವಂತೂ ಇರಲೇ ಇಲ್ಲ. 

ಜಿಲ್ಲಾಡಳಿತ ಈ ಕಾರ್ಯಕ್ರಮ ಆಯೋಜಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News