ಮಾಜಿ ಪ್ರಧಾನಿ ದೇವೇಗೌಡ ಆಸ್ಪತ್ರೆಯಿಂದ ಬಿಡುಗಡೆ

Update: 2021-04-05 17:07 GMT

ಬೆಂಗಳೂರು, ಎ. 5: ಕೊರೋನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೋಂಕಿನಿಂದ ಗುಣಮುಖರಾಗಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಮಾ.31ರಂದು ದೇವೇಗೌಡ ಮತ್ತು ಅವರ ಧರ್ಮಪತ್ನಿ ಚೆನ್ನಮ್ಮ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಆ ಹಿನ್ನೆಲೆಯಲ್ಲಿ ದೇವೇಗೌಡ ಅವರನ್ನು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನ ಸೋಂಕಿನಿಂದ ಗುಣಮುಖರಾಗಿರುವ ದೇವೇಗೌಡ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಐದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವೇಗೌಡ ಅವರನ್ನು ಇಂದು ಆಸ್ಪತ್ರೆ ಸಿಬ್ಬಂದಿ ಪುಷ್ಪಗುಚ್ಚ ನೀಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು. 'ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಕೊರೋನ ನೆಗೆಟಿವ್ ಇದೆ. ಜ್ವರ ಇರುವ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಪತ್ನಿ ಚೆನ್ನಮ್ಮ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.

‘ನಿಮ್ಮ ಅಭಿಮಾನದ ಶ್ರೀರಕ್ಷೆ ನನ್ನ ಪಾಲಿಗಿರುವುದು ನಮ್ಮ ಸುದೈವವೆಂದೇ ಭಾವಿಸಿದ್ದೇವೆ. ಇದಕ್ಕಾಗಿ ನಿಮ್ಮೆಲ್ಲರಿಗೂ ನಮ್ಮ ಧನ್ಯವಾದ. ನಿಮ್ಮ ಹರಕೆ ಹಾರೈಕೆ ಫಲವಾಗಿ ನಾವೀಗ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದೇವೆ. ಆತಂಕ ಬೇಡ. ನಿಮ್ಮ ಎಂದಿನ ಅಭಿಮಾನ ಹೀಗೇ ಇರಲಿ. ನಾನು ಮತ್ತೆ ಕ್ರಿಯಾಶೀಲ ಸಾರ್ವಜನಿಕ ಬದುಕಿಗೆ ಮರಳುವವನಿದ್ದೇನೆ. ದೇವರ ದಯೆ ಎಲ್ಲ ಪಾಲಿಗಿರಲಿ'

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News