×
Ad

ರಾಜ್ಯದಲ್ಲಿ ಸೋಂಕಿತರು ಹೆಚ್ಚಾಗುವುದಿಲ್ಲ ಎಂದು ಭಾವಿಸುವುದು ಬೇಡ: ಸಚಿವ ಸುಧಾಕರ್

Update: 2021-04-05 17:49 IST

ಬೆಂಗಳೂರು, ಎ.5: ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರವು 15 ಲಕ್ಷಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ನೀಡಿದ್ದು, ಮತ್ತಷ್ಟು ಜನರು ಲಸಿಕೆ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿನ್ನೆವರೆಗೆ 46,02,000 ಮಂದಿಗೆ ಲಸಿಕೆ ನೀಡಲಾಗಿದೆ. 12 ಲಕ್ಷ ಲಸಿಕೆ ರಾಜ್ಯದಲ್ಲಿತ್ತು. ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ ಬಳಿಕ 15 ಲಕ್ಷಕ್ಕೂ ಹೆಚ್ಚು ಲಸಿಕೆ ದೊರೆತಿದೆ. 10 ಲಕ್ಷ ಡೋಸ್ ಬೆಂಗಳೂರಿಗೆ ಹಾಗೂ 5 ಲಕ್ಷ ಡೋಸ್ ಬೆಳಗಾವಿಗೆ ರವಾನಿಸಲಾಗಿದೆ. ಕೇಂದ್ರ ಸರಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ರಜೆ ಇದ್ದಿದ್ದರಿಂದ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಇನ್ನಷ್ಟು ಇಳಿಕೆ ಮಾಡಬಹುದು. ಎಂಟು ರಾಜ್ಯಗಳೊಂದಿಗೆ ಪ್ರಧಾನಿ ಮೋದಿ ಸಭೆ ನಡೆಸಿ, ಕಠಿಣ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಠಿಣ ನಿರ್ಧಾರ ವಹಿಸಲಾಗಿದೆ. ನಮ್ಮ ರಾಜ್ಯದಲ್ಲಿ ಆ ಬಗೆಯ ಪರಿಸ್ಥಿತಿ ಬರುವುದು ಬೇಡ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವುದಿಲ್ಲ ಎಂದು ಭಾವಿಸುವುದು ಬೇಡ ಎಂದು ಸುಧಾಕರ್ ಎಚ್ಚರಿಸಿದರು.

ಜೀವ ಉಳಿಸುವ ಕೆಲಸ ಮಾಡಬೇಕು: ಸೋಂಕಿತರ ಸಂಖ್ಯೆ ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಾಗುತ್ತದೆ. ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಬಳಿ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಇನ್ನಷ್ಟು ಚರ್ಚೆ ಮಾಡುತ್ತೇನೆ. ಇನ್ನು ಮೇ ಅಂತ್ಯದವರೆಗೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಎರಡನೇ ಅಲೆಯನ್ನು ನಿಯಂತ್ರಿಸಿ ಜೀವ ಉಳಿಸುವ ಕೆಲಸ ಮಾಡಬೇಕು. ಇದಕ್ಕೆ ಎಲ್ಲ ಸಹಕಾರ ಬೇಕು ಎಂದು ಸುಧಾಕರ್ ಮನವಿ ಮಾಡಿದರು.

ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಆರೂವರೆ ಸಾವಿರ ಸೋಂಕಿತರು ಕಂಡುಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಸೋಂಕು ನಿಯಂತ್ರಣ ಮಾಡದಿದ್ದರೆ ಕಠಿಣ ಪರಿಸ್ಥಿತಿ ಬರಬಹುದು. ವಿರೋಧ ಪಕ್ಷಗಳ ಸಲಹೆಗಳನ್ನು ನಾವು ಪಡೆಯುತ್ತೇವೆ. ಸಮಯ ಬಂದಾಗ ಪ್ರತಿಪಕ್ಷದವರನ್ನು ಕರೆದು ಚರ್ಚಿಸೋಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಗರದ ವಿಕ್ಟೋರಿಯಾ, ಬೌರಿಂಗ್ ಆಸ್ಪತ್ರೆಗಳಲ್ಲಿ ಕೋವಿಡ್‍ಗೆ ಹೆಚ್ಚು ಹಾಸಿಗೆ ಮೀಸಲಿಡುವ ಅಗತ್ಯವಿದೆ. ಇದರ ಕಡೆ ಹೆಚ್ಚು ಲಕ್ಷ್ಯ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಹಾಸಿಗೆ ಮೀಸಲಿಡಬೇಕೆಂದು ಹೇಳಲಾಗಿದೆ. ಈ ಪ್ರಮಾಣವನ್ನೂ ಹೆಚ್ಚಿಸಬೇಕಿದೆ ಎಂದು ಸುಧಾಕರ್ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News